ಭಾರತ- ಚೀನಾ ಚರ್ಚೆ ಇನ್ನೂ ನಿಗೂಢ

ನವದೆಹಲಿ,ಸೆ.೧೪- ಈ ವಾರ ಸಮರ್‌ಖಂಡ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿಜಿಂಗ್‌ಪಿಂಗ್ ಅವರ ನಡುವಣ ದ್ವಿಪಕ್ಷೀಯ ಮಾತುಕತೆ ನಡೆಯುವುದು ಇನ್ನೂ ನಿಗೂಢವಾಗಿದೆ.
ಪೂರ್ವ ಲಡಾಕ್‌ನ ಗೋಗ್ರಾ-ಹಾಟ್‌ಫ್ರಿಂಗ್‌ನಲ್ಲಿ ಸೇನಾ ವಾಪಾಸಾತಿ ಪ್ರಕ್ರಿಯೆ ನಿನ್ನೆಯಷ್ಟೇ ಪೂರ್ಣಗೊಂಡಿದ್ದರೂ, ಉಭಯ ನಾಯಕರ ನಡುವಣ ಮಾತುಕತೆ ನಡೆಯುವ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಹೊರ ಬಿದ್ದಿಲ್ಲ.
ಉಜ್ಬೇಕಿಸ್ಥಾನದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಲಿದ್ದಾರೆ. ಆದರೆ, ಎರಡೂ ರಾಷ್ಟ್ರಗಳ ನಡುವೆ ಔಪಚಾರಿಕ ಮಾತುಕತೆ ನಡೆಯುವುದು ಇನ್ನೂ ದೃಢಪಟ್ಟಿಲ್ಲ.
ಮೋದಿ ಮತ್ತು ಕ್ಸಿಜಿಂಗ್‌ಪಿಂಗ್ ನಡುವೆ ಮಾತುಕತೆ ನಡೆಯಲಿದೆ ಎಂಬ ಬಗ್ಗೆ ಚೀನಾದಿಂದ ಯಾವುದೇ ಪ್ರತಿಕ್ರಿಯೆಯೂ ಹೊರಬಿದ್ದಿಲ್ಲ. ಮೋದಿ ಅವರು ಹಲವು ನಾಯಕರ ಜತೆ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿ ನಿರತರಾಗಲಿದ್ದಾರೆ. ಹೀಗಾಗಿ, ಚೀನಾ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ
ಇದೇ ವೇಳೆ ರಷ್ಯಾ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ. ನರೇಂದ್ರಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ಪುಟೀನ್ ಸಮರ್‌ಖಂಡ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವಿದ್ಯುತ್, ಆಹಾರ ಭದ್ರತೆ ಮಾತುಕತೆ ವೇಳೆ ಪ್ರಮುಖ ಕಾರ್ಯಸೂಚಿಯಾಗಿರಲಿವೆ.
ಇದೇ ಸಂದರ್ಭದಲ್ಲಿ ಮೋದಿ ಅವರು ಇರಾನ್, ಉಜ್ಬೇಕಿಸ್ತಾನ್ ದೇಶಗಳ ನಡುವೆಯೂ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆದರೆ, ಪಾಕಿಸ್ತಾನದ ಜತೆ ಮೋದಿ ಅವರು ಮಾತುಕತೆ ನಡೆಸುವ ಯಾವುದೇ ಪ್ರಸ್ತಾಪಗಳು ಚರ್ಚೆಯಾಗಿಲ್ಲ.