ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಜೆರ್ಸಿ

ನವದೆಹಲಿ, ಸೆ. ೧೯- ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-೨೦ ವಿಶ್ವ ಕಪ್ ಕ್ರಿಕೆಟ್ ಮುನ್ನವೇ ಬಿಸಿಸಿಐ ಭಾರತ ತಂಡದ ಪುರುಷರ ಮತ್ತು ಮಹಿಳಾ ತಂಡಕ್ಕೆ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಈ ಹೊಸ ಜೆರ್ಸಿಯೊಂದಿಗೆ ರೋಹಿತ್ ಶರ್ಮ ನೇತೃತ್ವದ ತಂಡ ಈ ಟೂರ್ನಿಯಲ್ಲಿ ನೀಡುವ ಪ್ರದರ್ಶನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಈ ಹೊಸ ಜೆರ್ಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಸಿಂಗ್, ಶೆಫಾಲಿ ವರ್ಮ ಮತ್ತು ರೇಣುಕಾಸಿಂಗ್ ಹೊಸ ಜೆರ್ಸಿಯೊಂದಿಗೆ ಫೋಸ್ ನೀಡಿದ್ದಾರೆ. ಈ ಹೊಸ ಜೆರ್ಸಿ ಎರಡು ಬಣ್ಣಗಳಲ್ಲಿ ಕಂಗೊಳಿಸುತ್ತಿದೆ.
ಈ ಜೆರ್ಸಿಯನ್ನು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಸಮರ್ಪಿಸಲಾಗಿದೆ ಎಂದು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಮೊದಲ ಟಿ-೨೦ ವಿಶ್ವ ಕಪ್‌ನಲ್ಲಿ ಭಾರತ ತಂಡದ ತಿಳಿ ನೀಲಿ ಬಣ್ಣದ ಜೆರ್ಸಿಯ ಬಲಭಾಗದಲ್ಲಿ ತ್ರಿವರ್ಣ ಧ್ವಜ ಇರಿಸಲಾಗಿತ್ತು. ಈ ಮೊದಲ ಆವೃತ್ತಿಯಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಗೆಲುವು ಸಾಧಿಸಿತ್ತು.