
ಅಹ್ಮದಾಬಾದ್, ಮಾ.,15-ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟಿ.20 ಪಂದ್ಯ ನಾಳೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಸೋತು ಎರಡನೇ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ, ನಾಳಿನ ಪಂದ್ಯದಲ್ಲಿ ಬ್ಯಾಟಿಂಗ್ ಕೈಚಳಕ ತೋರುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದಾರೆ.
ಬ್ಯಾಟಿಂಗ್ ವೈಫಲ್ಯ ಕಂಡಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತೆ ಲಯಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಎರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಇಶಾನ್ ಕಿಶನ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿರುವುದರಿಂದ
ರೋಹಿತ್ ಶರ್ಮಾ ಅವರಿಗಾಗಿ ಕೆ.ಎಲ್.ರಾಹುಲ್ ಬೆಂಚು ಕಾಯುವ ಸಾಧ್ಯತೆ ಹೆಚ್ವಾಗಿದೆ.
ರಾಹುಲ್ ಹಿಂದಿನ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಅಕ್ಟೋಬರ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವುದು ಭಾರತ ತಂಡದ ಪ್ರಮುಖ ಗುರಿಯಾಗಿರುವುದರಿಂದ ಹೆಚ್ಚಿನ ಪ್ರಯೋಗಗಳಿಗೆ ಕೈಹಾಕಲು ತಂಡದ ಆಡಳಿತ ಮುಂದಾಗಲಾರದು ಎಂದು ನಿರೀಕ್ಷಿಸಲಾಗಿದೆ.
ಇಂಗ್ಲೆಂಡ್ ಪರವಾಗಿ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಜೇಸನ್ ರಾಯ್ ಪುಟಿದೆದ್ದರೆ ಭಾರತಕ್ಕೆ ಸ್ವಲ್ಪ ಸಂಕಷ್ಟವಾಗಲಿದೆ. ಸ್ಪಿನ್ನರ್ಗಳಿಗೆ ಪಿಚ್ ಅನುಕೂಲ ಆಗುವ ನಿರೀಕ್ಷೆ ಇರುವುದರಿಂದ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಗೆಲುವಿಗಾಗಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ತಂಡಗಳು ಇಂತಿವೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ಶ್ರೇಯಸ್ ಆಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಾಹರ್, ರಾಹುಲ್ ತೇವಟಿಯಾ, ಇಶಾನ್ ಕಿಶನ್.
ಇಂಗ್ಲೆಂಡ್: ಏಯನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಆದಿಲ್ ರಶೀದ್, ರೀಸಿ ಟೋಪ್ಲಿ, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲಿಂಗ್ಸ್, ಜಾನಿ ಬೆಸ್ಟೊ, ಜೊಫ್ರಾ ಆರ್ಚರ್.
ಆರಂಭ: ಸಂಜೆ 7.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್