
ಸಿಡ್ನಿ,ಜ.೧೧-ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ೩ನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಭಾರತೀಯ ಆಟಗಾರರು ಯಶಸ್ವಿಯಾಗಿದ್ದಾರೆ. ಸೋಲಿನ ಸುಳಿಯಿಂದ ಪಾರಾಗಲು ಭಾರತ ರಕ್ಷಣಾತ್ಮಕ ಆಟವಾಡುವ ಮೂಲಕ ಪ್ರಯಾಸಪಟ್ಟು ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಗೆಲುವಿನ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾಕ್ಕೆ ತೀವ್ರ ನಿರಾಸೆಯುಂಟಾಯಿತು.
ಆಸ್ಟ್ರೇಲಿಯಾ ಒಡ್ಡಿ ೪೦೭ ರನ್ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಅಂತಿಮ ದಿನದ ಆಟದ ೨ನೇ ಇನ್ನಿಂಗ್ಸ್ನಲ್ಲಿ ೫ ವಿಕೆಟ್ ನಷ್ಟಕ್ಕೆ ೩೩೪ ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.
೪ನೇ ದಿನದ ಆಟದ ಅಂತ್ಯಕ್ಕೆ ಭಾರತ ೨ ವಿಕೆಟ್ ನಷ್ಟಕ್ಕೆ ೯೮ ರನ್ ಗಳಿಸಿತ್ತು ಇಂದು ಆಟ ಮುಂದುವರೆಸಿದ ಭಾರತಕ್ಕೆ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ನೀಡಿತ್ತು. ೪ ರನ್ ಗಳಿಸಿದ್ದ ನಾಯಕ ರಹಾನೆ ಅವರನ್ನು ಲೈಯಾಂಡ್ ಪೆವಿಲಿನ್ಗೆ ಕಳುಹಿಸಿದ್ದರು.
ಈ ಸಂದರ್ಭದಲ್ಲಿ ಪೂಜಾರ ಮತ್ತು ಪಂತ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಬೆನ್ನೆಲುಬಾಗಿ ನಿಂತರು. ಈ ಜೋಡಿ ಭೋಜನ ವಿರಾಮದ ವೇಳೆಗೆ ೧೦೪ ರನ್ಗಳನು ಕಲೆ ಹಾಕಿತು.
ಆಸೀಸ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಪಂತ್, ಇನ್ನೇನು ಶತಕ ಬಾರಿಸುವ ಅಂಚಿನಲ್ಲಿದ್ದ ವೇಳೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ೯೭ ರನ್ ಗಳಿಸಿ ಔಟ್ ಆದರು. ಆಗ ಭಾರತದ ಗೆಲುವಿನ ಆಸೆ ಕಮರಿ ಹೋಯಿತು.
ನಂತರ ಪೂಜಾರ ಕೂಡ ೭೭ ರನ್ ಗಳಿಸಿ ಔಟ್ ಆದರು. ಕಡಿಮೆ ಓವರ್ಗಳಲ್ಲಿ ಹೆಚ್ಚು ರನ್ ಗಳಿಸಬೇಕಾಗಿದ್ದ ಭಾರತ ಸಿಲುಕಿತ್ತು. ಹನುಮವಿಹಾರಿ ಮತ್ತು ಆರ್.ಅಶ್ವಿನ್ ತಾಳ್ಮೆಯಾಟವಾಡಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.
ಅಶ್ವಿನ್ ೩೯, ಹನುಮವಿಹಾರಿ ೨೩ ರನ್ ಬಾರಿಸಿ ಅಜೇಯರಾಗುಳಿದರು. ೪ ಟೆಸ್ಟ್ಗಳ ಸರಣಿಯಲ್ಲ ಉಭಯ ತಂಡಗಳು ಸಮಬಲ ಸಾಧಿಸಿದ್ದು, ಜ. ೧೫ ರಿಂದ ಆರಂಭವಾಗುವ ೪ನೇ ಪಂದ್ಯದಲ್ಲಿ ಸರಣಿಯ ಹಣೆಬರಹ ನಿರ್ಧಾರವಾಗಲಿದೆ.
ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್-೩೩೮
೨ನೇ ಇನ್ನಿಂಗ್ಸ್ ೬ ವಿಕೆಟ್ ನಷ್ಟಕ್ಕೆ ೩೧೨ ಡಿಕ್ಲೇರ್
ಭಾರತ ಮೊದಲ
ಇನ್ನಿಂಗ್ಸ್ ೨೪೪
೨ನೇ ಇನ್ನಿಂಗ್ಸ್ ೫ ವಿಕೆಟ್ ನಷ್ಟಕ್ಕೆ ೩೩೪