ಭಾರತ-ಅಮೇರಿಕಾ ನಡುವೆ ರಕ್ಷಣೆ,ಸಹಕಾರ ಸೇರಿ 5 ಒಪ್ಪಂದ: ರಾಜನಾಥ್ ಸಿಂಗ್

ನವದೆಹಲಿ,ಅ.27- ಭಾರತ ಮತ್ತು ಅಮೆರಿಕದ ರಕ್ಷಣೆ,ಸಹಕಾರ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿದೇಶಾಂಗ ಮತ್ತು ಸಚಿವ ಎಸ್ ಜೈಶಂಕರ್ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ನಡುವೆ ಐದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಒಪ್ಪಂದದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ, ರಕ್ಷಣೆ, ಸಹಕಾರ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳು ಸಹಿಹಾಕಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಬೆಳವಣಿಗೆ ಮತ್ತು ಗಟ್ಟಿಯಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಮೂರನೇ ಬಾರಿಗೆ ಭಾರತ ಮತ್ತು ಅಮೆರಿಕ ರಕ್ಷಣಾ ಹಾಗೂ ವಿದೇಶಾಂಗ ಸಚಿವರ ಸಭೆ ನಡೆದಿದೆ ಇದು ಐತಿಹಾಸಿಕ ಎಂದು ಬಣ್ಣಿಸಿದ ಅವರು ಈ ರೀತಿಯ ಸಭೆಗಳಿಂದ ಉಭಯ ದೇಶಗಳಲ್ಲಿ ಸ್ನೇಹ ಸಂಬಂಧ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಗಡಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸಲು ಉಭಯ ದೇಶಗಳ ರಕ್ಷಣಾ ಸಚಿವರು ಸಮ್ಮತಿ ನೀಡಿದ್ದಾರೆ ಎಂದು ಹೇಳಿದ ಅವರು, ಯಾವುದೇ ದೇಶ ತನ್ನ ಗಡಿ ಕಾಪಾಡಿಕೊಳ್ಳುವುದು ಆ ದೇಶದ ಸಾರ್ವಭೌಮತ್ವ ಎಂದು ಹೇಳಿದ್ದಾರೆ.

ಗಡಿಯಾಚೆ ಭಯೋತ್ಪಾದನೆ :

ಗಡಿಯಾಚೆ ಭಯೋತ್ಪಾದನೆ ನಡೆಯುತ್ತಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಎಸ್ ಜೈಶಂಕರ್ ಹೇಳಿದ್ದಾರೆ.

ಇಂಡೋ ಪೆಸಿಫಿಕ್ ವಲಯದಲ್ಲಿ ಶಾಂತಿ-ಸುವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ಭಾರತ-ಅಮೆರಿಕ ಚರ್ಚೆ ನಡೆಸುವೆ ಫಲಪ್ರದವಾಗಿ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಗಡಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಭಾರತದ ತಂಟೆಗೆ ಯಾರಾದರೂ ಬಂದರೆ ಅದನ್ನು ಎದುರಿಸಲು ಭಾರತಕ್ಕೆ ಶಕ್ತಿಯಾಗಿ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಖಾಯಂ ಸ್ಥಾನ : ಬೆಂಬಲ

ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಭಾರತಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡುವುದಾಗಿ ಅಮೆರಿಕ ಇಂದಿಲ್ಲಿ ಮತ್ತೊಮ್ಮೆ ಪುನರುಚ್ಚರಿಸಿದೆ.

2+2 ಸಚಿವರ ಸಭೆಯ ಬಳಿಕ ಮಾಹಿತಿ ನೀಡಿದ ಮೈಕ್ ಪಾಂಪಿಯೋ ಕಾಯಂ ಸ್ಥಾನ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತದ ಜೊತೆ ಅಮೆರಿಕ ಇರಲಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮಾತನಾಡಿ ಇಂಡೋ ಪೆಸಿಫಿಕ್ ವಲಯ ಸೇರಿದಂತೆ ಶಾಂತಿ ಕಾಪಾಡಲು ಅಮೆರಿಕ ಭಾರತದ ಜೊತೆ ಸದಾ ಇರಲಿದೆ ಎಂದು ಹೇಳಿದ ಅವರು ಭಾರತಕ್ಕೆ ತೊಂದರೆ ಕೊಡುವರಿಗೂ ತಕ್ಕ ಪಾಠ ಕಲಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ