ಭಾರತ-ಅಮೆರಿಕ ಮಹತ್ವದ ಚರ್ಚೆ


ನವದೆಹಲಿ, ಅ.೨೭- ಭಾರತ ಮತ್ತು ಅಮೆರಿಕ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರುಗಳ ೨+೨ ಸಭೆಯಲ್ಲಿ ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಅಮೇರಿಕಾದ ರಕ್ಷಣಾ ಮತ್ತು ವಿದೇಶಾಂಗ ಕಾರ್ಯದರ್ಶಿಗಳು ದೆಹಲಿಯಲ್ಲಿಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಅಜಿತ್ ದೋವಲ್ ಭೇಟಿಯ ಸಮಯದಲ್ಲಿ ಅಮೆರಿಕದ ಇಬ್ಬರು ರಕ್ಷಣೆ ಮತ್ತು ವಿದೇಶಾಂಗ ಕಾರ್ಯದರ್ಶಿಗಳು ಚೀನಾ ಗಡಿ ಕ್ಯಾತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಪದೇಪದೇ ಚೀನಾ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ತಿರುಗೇಟು ನೀಡುವ ಅಗತ್ಯವಿದೆ ಭಾರತಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಅಮೆರಿಕ ಭರವಸೆ ನೀಡಿದೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ ಭವಿಷ್ಯದಲ್ಲಿ ಅದು ಮುಂದುವರೆಯಲಿದೆ ಎನ್ನುವ ವಿಶ್ವಾಸವನ್ನು ಉಭಯ ಕಾರ್ಯದರ್ಶಿಗಳು ವ್ಯಕ್ತಪಡಿಸಿದ್ದಾರೆ
ಉಭಯ ದೇಶಗಳ ನಡುವೆ ಬಾಂಧವ್ಯವೃದ್ಧಿಗೆ ಈ ಭೇಟಿ ಮತ್ತಷ್ಟು ಪೂರಕವಾಗಲಿದೆ.ಈ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅಮೆರಿಕ ಹೇಳಿದೆ.
ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇಂಡೋನೇಷಿಯಾ ಪ್ರವಾಸ ಮುಗಿಸಿ ದೆಹಲಿಗೆ ಆಗಮಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ರಕ್ಷಣೆಯ ವ್ಯಾಪಾರ ತಂತ್ರಜ್ಞಾನ ವಿನಿಮಯ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ-ಅಮೆರಿಕ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಚೀನಾ ವಿರುದ್ಧ ಸಮರ ಸಾರಿರುವ ಅಮೆರಿಕ ತಾನು ಭೇಟಿ ನೀಡಿದ ದೇಶಗಳಲ್ಲಿ ಚೀನಾದ ಉತ್ಪನ್ನಗಳನ್ನು ತಿರಸ್ಕರಿಸುವ ಚೀನಾದೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಸಲಹೆ ಮಾಡುತ್ತಾ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಕ್ ಗಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಭೂಭಾಗದ ಮೇಲೆ ಚೀನಾ ಪದೇಪದೇ ಕಾಲುಕೆರೆದುಕೊಂಡು ಬರುತ್ತಿದ್ದು ಚೀನಾಗೆ ತಕ್ಕ ತಿರುಗೇಟು ನೀಡುವ ಅಗತ್ಯವಿದೆ ಎನ್ನುವ ವಿಷಯವನ್ನು ಅಮೆರಿಕ ಪ್ರಸ್ತಾಪ ಮಾಡಿದೆ. ಗಡಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಭಾರತಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ನೀಡಲಿದೆ ಎಂದು ಅಮೆರಿಕ ಭರವಸೆ ನೀಡಿದೆ.