ಭಾರತ- ಅಮೆರಿಕಾ ಮದ್ಯೆ ಬಾಂಧವ್ಯ ಬಲವರ್ಧನೆ

ನವದೆಹಲಿ, ಡಿ. ೨೩- ಭಾರತ ಮತ್ತು ಅಮೆರಿಕಾ ನಡುವೆ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಜೊತೆಗೆ ಮತ್ತಷ್ಟು ಬಾಂಧವ್ಯ ಬಲವರ್ಧನೆಗೆ ಉಭಯ ದೇಶಗಳು ದೃಢನಿಶ್ವಯ ಮತ್ತು ಬದ್ಧತೆ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಾದ ಅತ್ಯುನ್ನತ ಪ್ರಶಸ್ತಿಗಳನ್ನು ಒಂದಾದ ಲೀಜನ್ ಆಫ್ ಮೆರಿಟ್ ಪ್ರಶಸ್ತಿಯನ್ನು ಸ್ವೀಕಾರ ಮಾಡಿರುವುದು ಉಭಯ ದೇಶಗಳ ನಡುವೆ ಮತ್ತಷ್ಟು ಸಂಬಂಧ ಬಲವರ್ಧನೆಗೆ ನೆರವಾಗಲಿವೆ ಎಂದು ತಿಳಿಸಿದ್ದಾರೆ.
ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪ್ರಶಸ್ತಿಯನ್ನು ಉಡುಗೊರೆಯಾಗಿ ಪ್ರದಾನ ಮಾಡಿದ್ದು, ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಅಮೆರಿಕಾದಲ್ಲಿನ ಭಾರತೀಯ ರಾಯಭಾರಿ ತರಣ್ ಜಿನ್ ಸಿಂಗ್ ಸಂಧು ಅವರು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯಾನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅತ್ಯುನ್ನತ ಪ್ರಶಸ್ತಿಯಿಂದಾಗಿ ಉಭಯ ದೇಶಗಳ ಬಾಂದವ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಅಮೆರಿಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ದೃಢ ನಿಶ್ಚಯ ಹಾಗೂ ಬದ್ಧತೆಯೊಂದಿಗೆ ಉಭಯ ದೇಶಗಳು ಬಾಂಧವ್ಯವನ್ನು ಬಲಗೊಳಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
೨೧ನೇ ಶತಮಾನ ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳನ್ನು ಒದಗಿಸಿದೆ. ಅಲ್ಲದೆ, ಇಡೀ ಮಾನವೀಯತೆಯ ಅನುಕೂಲಕ್ಕಾಗಿ ಜಾಗತಿಕ ನಾಯಕತ್ವವನ್ನು ಒದಗಿಸಲು ಮತ್ತು ಜನರ ಅನನ್ಯ ಸಾಮರ್ಥ್ಯವನ್ನು ಉಭಯ ರಾಷ್ಟ್ರಗಳ ಸಂಬಂಧವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಾಂಧವ್ಯ ವೃದ್ಧಿಗೆ ಸಹಕಾರಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪ್ರದಾನ ಮಾಡಿರುವ ಹಿನ್ನೆಲೆಯಲ್ಲಿ ಭಾರತ – ಅಮೆರಿಕಾ ನಡುವೆ ಬಾಂಧವ್ಯ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ರಾಬರ್ಟ್ ಓಬ್ರಿಯಾನ್ ತಿಳಿಸಿದ್ದಾರೆ.
ವಿದೇಶಿ ಅಧಿಕಾರಿಗಳಿಗೆ ನೀಡಬಹುದಾದ ಅತ್ಯುನ್ನತ ಮಿಲಿಟರಿ ಪದಕಗಳಲ್ಲಿ ಲೀಜನೆ ಆಫ್ ಮೆರಿಟ್ ಕೂಡ ಒಂದು. ಅತ್ಯುತ್ತಮ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.