ಸಿರವಾರ,ಜೂ.೨೪-
ಜವಾಬ್ದಾರಿಯುತ ನಾಗರಿಕರನ್ನಾಗಿಸುವ ಮತ್ತು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮುದಾಯಗಳ ಸದಸ್ಯರನ್ನಾಗಿಸುವ, ತಮ್ಮ ಸಂಪೂರ್ಣ ದೈಹಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ಯುವಜನರ ಬೆಳವಣಿಗೆಗೆ ಕೊಡುಗೆ ನೀಡುವುದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶವಾಗಿದೆ ಎಂದು ಪಟ್ಟಣದ ಶಾಂತಿ ನಿಕೇತನ ಪ್ರೌಢ ಶಾಲೆಯ ಪ್ರಾಚಾರ್ಯೆ ಮತ್ತು ಗೈಡ್ ಕ್ಯಾಪ್ಟನ್ ಅನುರಾಧಾ ಹೇಳಿದರು.
ಸ್ಥಳೀಯ ಶಾಂತಿನಿಕೇತನ ಶಾಲೆಯಲ್ಲಿ ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆ ರಾಯಚೂರು, ಸ್ಥಳೀಯ ಸಂಸ್ಥೆ ಮಾನ್ವಿ ,ಶಾಂತಿನಿಕೇತನ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ೪ ನೇ ವಾರದ ಸೂರ್ಯನ ಕುರಿತಾದ ಶಿಬಿರಾಗ್ನಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಸೂರ್ಯನ ಕುರಿತಾದ ಅನಿಸಿಕೆಗಳು, ವಿವಿಧ ಸೇವಾ ಮನೋಭಾವ, ಧಾರ್ಮಿಕ ಭಾವನೆಗಳು, ಸ್ವಯಂಸೇವೆ, ಸಾಂಸ್ಕೃತಿಕ, ಪರಿಶ್ರಮ, ಸ್ವಾಭಿಮಾನದ ಕುರಿತ ಚಟುವಟಿಕೆಗಳನ್ನು ನಡೆಸಲಾಯಿತು.
ಸ್ಕೌಟ್ ಮಾಸ್ಟರ್ ಹನುಮೇಶ, ಗೈಡ್ ಕ್ಯಾಪ್ಟನ್ ಕುಸುಮಾ ಪವಾರ್, ಗೈಡ್ ಕ್ಯಾಪ್ಟನ್ ಉಮಾದೇವಿ, ಹಾಗು ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.