ಭಾರತ್ ಬಂದ್ -ಶಾಂತಿಯುತ ಪರೀಕ್ಷೆ, ವಾಹನ ಸಂಚಾರ ಸುಗಮ -ಕೂಡ್ಲಿಗಿಯಲ್ಲಿ ಮಿಶ್ರಪ್ರತಿಕ್ರಿಯೆ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 27 :- ಪಟ್ಟಣದಲ್ಲಿ ಬೆಳಿಗ್ಗೆಯಿಂದಲೆ ತೆರೆದ ಅಂಗಡಿ ಮುಗ್ಗಟ್ಟುಗಳು ನಂತರ ಪ್ರತಿಭಟನೆ ಸಂದರ್ಭದಲ್ಲಿ ಬಾಗಿಲು ಹಾಕಿ ಸಹಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ತೊಂದರೆಯಾಗದಂತೆ ಸಾರಿಗೆ ಸಂಚಾರ ಸುಗಮ ಪೊಲೀಸರ ಬಂದೋಬಸ್ತ್  ವಿವಿಧ ಸಂಘಟನೆಗಳ ಶಾಂತಿಯುತ ಪ್ರತಿಭಟನೆಯಿಂದ   ಭಾರತ್ ಬಂದ್ ಗೆ ಕೂಡ್ಲಿಗಿಯಲ್ಲಿ ಮಿಶ್ರಪ್ರತಿಕ್ರಿಯೆ.                                                                 ರೈತರ ಹಾಗೂ ಕಾರ್ಮಿಕ ವಿರೋಧಿ 2020ರ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು ಹಾಗೂ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಲು ರೈತರು ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಒತ್ತಾಯಿಸಿ ಇಂದು ಪಟ್ಟಣದಲ್ಲಿ ಭಾರತ್ ಬಂದ್ ಗೆ ಬೆಂಬಲಿಸಿ ರೈತರು, ಕಾರ್ಮಿಕರು, ದಲಿತಪರ ಸಂಘಟನೆಗಳು, ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ, ಕಮ್ಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಪಟ್ಟಣದ ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮ ರಾಷ್ಟ್ರಿಯ ಹುತಾತ್ಮರ ಸ್ಮಾರಕದಿಂದ ಪ್ರತಿಭಟನೆ ಪ್ರಾರಂಭವಾಗಿ ಪಟ್ಟಣದ ಡಾ. ಬಿ ಆರ್  ಅಂಬೇಡ್ಕರ್ ವೃತ್ತ  ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಹಾಗೂ ಖಾಸಗೀಕರಣ ಕಾಯ್ದೆ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮದಕರಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ವಿವಿಧ ಸಂಘಟನೆ ಮುಖಂಡರು ಸರ್ಕಾರವು ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸದೆ ಹಿಂಪಡೆಯಬೇಕು ಹಾಗೂ ಜನಹಿತ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಮಾತನಾಡಿದರು.
ಸಾರಿಗೆ ಸಂಚಾರ ಸುಗಮ :-   ಭಾರತ್ ಬಂದ್ ಇದ್ದರೂ ಇಂದು ಎಸ್ ಎಸ್ ಎಲ್ ಸಿ ಮಕ್ಕಳ ಪೂರಕ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆತರುವ ನಿಟ್ಟಿನಲ್ಲಿ ಹಾಗೂ ಅವರನ್ನು ಬಿಟ್ಟುಬರುವಲ್ಲಿ ಪ್ರತಿಭಟನಾಕಾರರಿಂದ ಯಾವುದೇ ಅಡ್ಡಿಯಾಗಿಲ್ಲವಾಗಿದ್ದು ಬೆಳಿಗ್ಗೆಯಿಂದಲೇ ಎಲ್ಲಾ ಗ್ರಾಮ ಹಾಗೂ ಹೊಸಪೇಟೆ, ಬಳ್ಳಾರಿ ದೂರದ ಊರುಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಬಿಡಲಾಗಿದ್ದು ಸ್ಥಳೀಯ ಸಂಘಟನೆಗಳ ಪ್ರತಿಭಟನೆಗನುಗುಣವಾಗಿ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಸ್ವಲ್ಪ ಕಾಲ ತಡೆ ಹಿಡಿದು ನಂತರ ಮತ್ತೆ ಸಂಚಾರ ಪ್ರಾರಂಭಿಸುವಂತೆ ಮೇಲಧಿಕಾರಿಗಳ ನಿರ್ದೇಶನ ಪಾಲಿಸುವುದಾಗಿ ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದರು. 
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದೇವರಮನೆ ಮಹೇಶ,  ಸಿಐಟಿಯು ರೈತ ಪ್ರಾಂತ ಸಂಚಾಲಕ ಸಿ.ವಿರುಪಾಕ್ಷಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ನಾಗರಾಜ, ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಕನಕೇರಿ ವೆಂಕಮ್ಮ, ರೈತ ಸಂಘದ ತಾಲೂಕು ಕಾರ್ಯದರ್ಶಿ ಕೆ ಕೃಷ್ಣಪ್ಪ,  ಜಿಲ್ಲಾಕಾರ್ಯಧ್ಯಕ್ಷ ಕಕ್ಕುಪ್ಪಿ ಬಸವರಾಜ, ಕೂಡ್ಲಿಗಿ ಸಿಐಟಿಯು ಸಂಚಾಲಕ ಗುನ್ನಳ್ಳಿ ರಾಘವೇಂದ್ರ, ಡಾ.ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್ ಭಾಷಾಸಾಬ್, ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷ ಪಿ ಓಬಳೇಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಮೂರ್ತಿಹಾಗೂ ಕಾರ್ಮಿಕ ಸಂಘಟನೆ ಹನುಮಂತಪ್ಪ ಹಾಗೂ ಕಾಂಗ್ರೆಸ್ ನ ಗುರುಸಿದ್ದನಗೌಡ, ಕಾವಲ್ಲಿ ಶಿವಪ್ಪ ನಾಯಕ ಶುಕೂರ್ ದುರುಗೇಶ್ ವಕೀಲರು, ಮುನ್ನಾ, ಜಿಲಾನ್,   ಇತರರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು  ಪ್ರತಿಭಟನೆಯಲ್ಲಿ ಭಾಗವಹಿಸಿ ಮದಕರಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ದೇವರಮನೆ ಮಹೇಶ ಸೇರಿದಂತೆ ಇತರರು ಮಾತನಾಡಿದರು.
ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ, ಸಿಪಿಐ ವಸಂತ ವಿ ಅಸೋದೆ ಹಾಗೂ ಪಿಎಸ್ಐ ಗಳಾದ ಶರತಕುಮಾರ ಹಾಗೂ ತನಿಖಾ ಪಿಎಸ್ಐ ಮಾಲೀಕ ಸಾಬ್ ಕಲಾರಿ ಸೇರಿದಂತೆ ಎಎಸ್ ಐಗಳು ಮತ್ತು ಸಿಬ್ಬಂದಿಗಳು ಪಟ್ಟಣದ ಸಾರಿಗೆ ಸಂಸ್ಥೆ ಘಟಕ ಮತ್ತು ಬಸ್ ನಿಲ್ದಾಣ ಸೇರಿದಂತೆ ವೃತ್ತಗಳ ಹಾಗೂ ಪ್ರತಿಭಟನೆಯೊಂದಿಗೆ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದರು