ಭಾರತ್ ಬಂದ್ ರಾಜ್ಯದಲ್ಲಿ ನೀರಸ


ಬೆಂಗಳೂರು, ಮಾ.೨೬- ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವನ್ನು ದೇಶದ ಬೇರೆ ಭಾಗಗಳಿಗೂ ಕೊಂಡೊಯ್ಯಲು ೪೦ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ನಾಲ್ಕು ತಿಂಗಳು ತುಂಬಿದ ಸಂದರ್ಭದಲ್ಲಿ ಕರೆ ನೀಡಿದ ಭಾರತ್ ಬಂದ್ ನ್ನು ವಿವಿಧ ಸಂಘಟನೆಗಳು ಬೆಂಬಲಿಸಿದ್ದರೂ ರಾಜ್ಯದಲ್ಲಿ ಯಾವುದೇ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಬೆಳಗ್ಗೆ ೬ಗಂಟೆಯಿಂದ ಸಂಜೆ ೬ರವರೆಗೆ ನಡೆದ ಭಾರತ್ ಬಂದ್ ವೇಳೆ ರಾಜ್ಯದಲ್ಲಿ ಎಂದಿನಂತೆ ವಾಹನ ಸಂಚಾರವಿದ್ದು ಅಂಗಡಿ ಮುಗ್ಗಟ್ಟು ವ್ಯಾಪಾರ ವಹಿವಾಟು ಯಥಾಸ್ಥಿತಿ ಯಲ್ಲಿ ಮುಂದುವರೆದಿದ್ದು ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟುಮಾಡಿಲ್ಲ ಬ್ಯಾಂಕಿಂಗ್ ಸೇವೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು ಕಚೇರಿ ಕೆಲಸಗಳಿಗೆ ಅಡ್ಡಿ ಉಂಟಾಗಿಲ್ಲ ಸರ್ಕಾರಿ ಖಾಸಗಿ ಕಚೇರಿಗಳಲ್ಲಿ ಹಾಜರಾತಿ ಮಾಮೂಲಾಗಿದೆ.
ಶವಯಾತ್ರೆ:
ಬಂದ್‌ಗೆ ವಿವಿಧ ಕಾರ್ಮಿಕ ಸಂಘಟನೆ, ಸಾರಿಗೆ ಹಾಗೂ ವಿವಿಧ ಒಕ್ಕೂಟಗಳು ಬೆಂಬಲ ಸೂಚಿಸಿದ್ದರೂ ಬಂದ್ ನೀರಸವಾಗಿತ್ತು ಬಂದ್ ಬೆಂಬಲಿಸಿ ರೈತ ಮುಖಂಡ ಕುರುಬುರು ಶಾಂತಕುಮಾರ್ ಅವರ ನೇತೃತ್ವದಲ್ಲಿ ರೈತರು ಕೃಷಿ ಕಾಯ್ದೆಗಳ ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ಹಿಂದೆ ಸರಿದ ಕೋಡಿಹಳ್ಳಿ:
ಭಾರತ್ ಬಂದ್ ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಂಘಟನೆ ಹಿಂದೆ ಸರಿದಿತ್ತು. ಯಾವುದೇ ತಯಾರಿ ಇಲ್ಲದೆ ಬಂದ್ ಮಾಡಲು ಸಾಧ್ಯವಿಲ್ಲ. ಇನ್ನು ಒಂದೇ ದಿನ ಬಾಕಿ ಇರುವುದು. ಬಂದ್ ಮಾಡಿದರೆ ಯಶಸ್ವಿಯಾಗಲ್ಲ.
ಹಾಗಾಗಿ ಭಾರತ್ ಬಂದ್‌ಗೆ ನಾವು ತಟಸ್ಥವಾಗಿರುತ್ತೇವೆ. ಬಂದ್ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಕರ್ನಾಟಕ ಸೇರಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದಿದ್ದರೂ ರೈತ ಸಂಘಟನೆಗಳ ನಾಯಕರು ಅಲ್ಲಲ್ಲಿ ಹೆದ್ದಾರಿ ತಡೆದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು
ಬಂದ್ ಹಿನ್ನೆಲೆಯಲ್ಲಿ ರೈಲು, ರಸ್ತೆ ಸಂಚಾರದಲ್ಲಿ ಕೆಲವೆಡೆ ವ್ಯತ್ಯಯವಾಗಿದ್ದು, ಅಗತ್ಯ ವಸ್ತುಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ. ಆದರೂ ದೇಶದ ಕೆಲವು ಭಾಗಗಳಲ್ಲಿ ಹಾಲು ,ತರಕಾರಿ ಪೂರೈಕೆ ಮಾಡುವುದನ್ನು ನಿಲ್ಲಿಸಿ ರೈತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು
ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು, ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ವಿನಾಯಿತಿ ಬಂದ್ ನಿಂದ ವಿನಾಯಿತಿ ನೀಡಲಾಗಿದೆ.
ರೈತರಿಗೆ ಮಾರಕವಾಗಲಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಸಿಂಘು, ಟಿಕ್ರಿ, ಗಾಜಿಯಾಬಾದ್ ಗಡಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರದ ಹಠಮಾರಿತನ ಧೋರಣೆ ರೈತರನ್ನು ಕೆರಳಿಸಿದೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ದೇಶದ ಹಲವು ಕಡೆ ಮಾರುಕಟ್ಟೆಗಳನ್ನು ಸ್ಥಗಿತ ಮಾಡಲಾಗಿತ್ತು,ಬೆಂಗಳೂರು ಸೇರಿದಂತೆ ದೇಶದ ಇನ್ನೂ ಕೆಲವು ಕಡೆ ಬಂದ್ ಇದೆಯಾ ಎನ್ನುವಂತೆ ಮಾರುಕಟ್ಟೆಗಳಲ್ಲಿ ನಿತ್ಯದ ವ್ಯಾಪಾರ ವಹಿವಾಟು ಮುಂದುವರಿದಿತ್ತು.

ಗಾಜಿಯಾಪುರ ಗಡಿ ಬಂದ್:

ಗಾಜಿಯಾಪುರ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗಡಿಯನ್ನು ದೆಹಲಿ ಪೊಲೀಸರು ಸಂಪೂರ್ಣ ವಾಗಿ ಮುಚ್ಚಿದ್ದರು. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ಎಂದು ದೆಹಲಿ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ಹಾಲು ,ತರಕಾರಿ ಬಂದ್:

ದೇಶದ ಹಲವು ಕಡೆ ರೈತರು ಹಾಲು ತರಕಾರಿ ಪೂರೈಕೆ ಮಾಡುವುದನ್ನು ನಿಲ್ಲಿಸಿ ಕೃಷಿ ಕಾಯ್ದೆಯನ್ನು ಹಿಂಪಡೆಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಗುಡುಗಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ದರ್ಶನ್ ಪಾಲ್ ಸಿಂಗ್ ಅವರು, ಹಾಲು ತರಕಾರಿ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಪೂರೈಕೆಯನ್ನು ರೈತರು ಹಲವು ಭಾಗಗಳಲ್ಲಿ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.