ಭಾರತ್ ಬಂದ್ ಬೆಂಬಲಿಸಿ ಎಡ, ಜಾತ್ಯಾತೀತ ಪಕ್ಷಗಳಿಂದ ಪ್ರತಿಭಟನೆ: ಕಾಂಗ್ರೆಸ್ಸಿನಿಂದ ದ್ವಿಚಕ್ರವಾಹನಗಳ ರ್ಯಾಲಿ

ಕಲಬುರಗಿ:ಸೆ.25: ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಸೆಪ್ಟೆಂಬರ್ 27ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು, ಕರೆಯನ್ನು ಬೆಂಬಲಿಸಿ ಶನಿವಾರ ಎಡ ಪಕ್ಷಗಳು ಹಾಗೂ ಜಾತ್ಯಾತೀತ ಪಕ್ಷಗಳು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದ್ದವು. ಈ ಮಧ್ಯೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾರತ್ ಬಂದ್ ಬೆಂಬಲಿಸಿ ದ್ವಿಚಕ್ರವಾಹನಗಳ ರ್ಯಾಲಿಯನ್ನು ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪೆನಿಗಳ ಪರವಾದ ಮತ್ತು ರೈತ ಹಾಗೂ ಕಾರ್ಮಿಕರ ಮತ್ತು ಎಲ್ಲ ನಾಗರಿಕರ ವಿರುದ್ಧವಾದ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತ್ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ), ಭಾರತ್ ಕಮ್ಯುನಿಸ್ಟ್ ಪಕ್ಷ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸ್ವರಾಜ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಎಸ್‍ಯುಸಿಐಸಿಯ ಜಿಲ್ಲಾ ಕಾರ್ಯದರ್ಶಿ ಕಾ. ಎಚ್.ವಿ. ದಿವಾಕರ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡಿಯಾಳ್, ಆರ್‍ಪಿಐ ಪಕ್ಷದ ಮುಖಂಡ ಶರಣಬಸಪ್ಪ ಹೇರೂರ್, ಸ್ವರಾಜ್ ಇಂಡಿಯಾ ಜಿಲ್ಲಾ ಸಂಚಾಲಕ ಶಿವಕುಮಾರ್ ರೇಶ್ಮಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ಕೃಷಿ ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಿದರು.
ಈ ಮಧ್ಯೆ, ಭಾರತ್ ಬಂದ್ ಬೆಂಬಲಿಸಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ದ್ವಿಚಕ್ರವಾಹನಗಳ ರ್ಯಾಲಿಯನ್ನು ಮಾಡಿದರು. ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಮುಖಂಡರಾದ ವಿಜಯಕುಮಾರ್ ಜಿ. ರಾಮಕೃಷ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಧನ್ನೂರ್. ಅರುಣಕುಮಾರ್ ಪಾಟೀಲ್, ರವಿ ದೇಗಾಂವ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮಹಾಮಾರಿ ಕೋವಿಡ್ ನಿಯಮಗಳನ್ನು ಕಾಂಗ್ರೆಸ್ ಪ್ರತಿಭಟನೆಕಾರರು ಎಲ್ಲಿಯೂ ಪಾಲಿಸಲಿಲ್ಲ. ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೂ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಪಾಡಲಿಲ್ಲ. ಅಲ್ಲದೇ ರಸ್ತೆ ಸಾರಿಗೆ ನಿಯಮಗಳನ್ನು ಸಹ ಉಲ್ಲಂಘಿಸಿದ್ದರು. ದ್ವಿಚಕ್ರವಾಹನ ಸವಾರರು ಹೆಲ್ಮೇಟ್ ಸಹ ಧರಿಸಿರಲಿಲ್ಲ. ಪ್ರತಿಭಟನೆಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಹಾಕಿದರು.