ಭಾರತ್ ಬಂದ್ :ಪ್ರತಿಭಟನೆ ನಡೆಸುತ್ತಿದ್ದ 30ಕ್ಕೂ ಹೆಚ್ಚು ಜನರ ಬಂಧನ

ಕಲಬುರಗಿ,ಮಾ.26-ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಇಂದು ಕರೆ ನೀಡಿದ ” ಭಾರತ ಬಂದ್” ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 30ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದರು.
ಸಂಯುಕ್ತ ಹೋರಾಟ ಸಮಿತಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶಾದ್ಯಂತ ಭಾರತ್ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಿಗ್ಗೆ ಆರು ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದುಗಡೆ ಪ್ರತಿಭಟನೆ ಆರಂಭಿಸಿದರು. ಪೊಲೀಸ್ ಇಲಾಖೆ ಬಂದ್ ನಡೆಸಲು ಅನುಮತಿ ನೀಡದ ಕಾರಣ ಹೋರಾಟಗಾರರು ಪ್ರತಿಭಟನೆಗಿಳಿದಿದ್ದರು. ಸಂಯುಕ್ತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಕೆ.ನೀಲಾ, ಮೌಲಾ ಮುಲ್ಲಾ, ಭೀಮಶೆಟ್ಟಿ ಯಂಪಳ್ಳಿ, ಶೌಕತ್ ಅಲಿ ಆಲೂರ, ಎಸ್.ಎಂ.ಶರ್ಮಾ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ರೈತ ವಿರೋಧಿ ಕರಾಳ ಕೃಷಿ ಕಾಯ್ದೆ ಹಿಂಪಡೆಯಬೇಕು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪೆಟ್ರೋಲ್, ಡಿಜೇಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿದರು.
@12bc =ಪರಿಣಾಮ ಬೀರದ ಬಂದ್
ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ ಜನ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ಬಸ್, ಆಟೋ ಸಂಚಾರ ಎಂದಿನಂತಿತ್ತು. ಬೆಳಿಗ್ಗೆಯೇ ಎಲ್ಲಾ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ತೆರೆದು ವಹಿವಾಟು ನಡೆಸಿದರು.
ನಗರದ ಸುಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಬಸ್ ನಿಲ್ದಾಣ, ಎಪಿಎಂಸಿಗಳಲ್ಲಿ ವ್ಯಾಪಾರ, ವಹಿವಾಟು ಎಂದಿನಂತೆಯೇ ಇತ್ತು. ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಪಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದ್ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡದ ಕಾರಣ ಹೋರಾಟಗಾರರು ಪ್ರತಿಭಟನೆ ಮಾತ್ರ ನಡೆಸಿದರು.