ಭಾರತ್ ಬಂದ್ ಪರವಾಗಿ ಸುಯುಸಿಐ ಬೀದಿಬದಿ ಪ್ರಚಾರ ಸಭೆ

ರಾಯಚೂರು.ಸೆ.೨೫-ರೈತರು ಕರೆ ನೀಡಿರುವ ಸೆಪ್ಟೆಂಬರ್ ೨೭ರಭಾರತ್ ಬಂದ್ ಯಶಸ್ವಿಗೊಳಿಸುವಂತೆ ಪಕ್ಷದ ರಾಯಚೂರು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ನಗರದ ವಿವಿಧ ವೃತ್ತಗಳಲ್ಲಿ ಬೀದಿಬದಿ ಸಭೆ ನಡೆಸಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಸಿ ಜಿಲ್ಲಾ ಸಮಿತಿ ಸದಸ್ಯರಾದ ಎನ್.ಎಸ್.ವೀರೇಶ್ ಅವರು ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಬಂಡವಾಳಶಾಹಿ ಪರ, ಜನವಿರೋಧಿ ಮೂರು ಕೃಷಿ ಕಾಯಿದೆಗಳ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಯ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಹತ್ತು ತಿಂಗಳು ತುಂಬಿದೆ.
ಹತ್ತು ತಿಂಗಳು ನಿರಂತರವಾಗಿ ನಡೆಯುತ್ತಿರುವ ಈ ರೈತ ಚಳುವಳಿ ಜಗತ್ತಿನಲ್ಲೇ ಅದ್ವಿತೀಯವಾದದ್ದು, ಚಾರಿತ್ರಿಕವಾದದ್ದು. ಚಳಿ, ಬಿಸಿಲು, ಮಳೆ, ಕೋವಿಡ್ ಸಾಂಕ್ರಾಮಿಕಗಳನ್ನು ಲೆಕ್ಕಿಸದೆ ಲಕ್ಷಾಂತರ ರೈತರು ಮತ್ತು ಕೃಷಿ ಕೂಲಿಕಾರರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ರೈತ ಮಹಿಳೆಯರು, ಮಕ್ಕಳು ಇಲ್ಲಿ ಭಾಗಿಯಾಗಿದ್ದಾರೆ. ಗೆಲುವು ಇಲ್ಲವೇ ಸಾವು ಎಂಬ ಸ್ಫೂರ್ತಿಯೊಂದಿಗೆ ಈಗಾಗಲೇ ಆರು ನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಆದರೆ ಬಹುಮತ, ಸುಭದ್ರತೆ ಇರುವ ಶ್ರೀಮಾನ್ ಮೋದಿ ಸರ್ಕಾರದ ಕಲ್ಲೆದೆ ಇದಕ್ಕೆ ಕರಗಿಲ್ಲ ಎಂದರು.
ಈ ಹೋರಾಟ ಕೇವಲ ರೈತರ ಹೋರಾಟವಲ್ಲ .ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ಕೇವಲ ರೈತರಿಗೆ ಸಂಬಂಧಿಸಿದ ವಿಷಯವಲ್ಲ. ಅಕ್ಕಿ, ಬೇಳೆ, ಅಡುಗೆಎಣ್ಣೆ, ಆಲೂಗಡ್ಡೆ ಮುಂತಾದ ಅಗತ್ಯ ವಸ್ತುಗಳ ದಾಸ್ತಾನು ಮತ್ತು ಬೆಲೆಯ ಮೇಲಿನ ನಿಯಂತ್ರಣ ತೆಗೆದುಹಾಕಿದರೆ ರೈತರಿಗಿಂತಲೂ ಕಾರ್ಮಿಕರಿಗೆ, ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಹೆಚ್ಚು ತೊಂದರೆಯಾಗಲಿದೆ. ಕೃಷಿ ಉತ್ಪಾದನೆ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳ ಕೈವಶವಾದರೆ ರೈತರು ಮತ್ತು ಜನಸಾಮಾನ್ಯರೆಲ್ಲರೂ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಆದ್ದರಿಂದ ಎಲ್ಲಾ ಜನಸಾಮಾನ್ಯರು ಈ ಬಂದ್ ಬೆಂಬಲಿಸಬೇಕು ಎಂದರು.
ಇನ್ನೋರ್ವ ಸದಸ್ಯರಾದ ಮಹೇಶ್ ಚೀಕಲಪರ್ವಿ ಮಾತನಾಡಿ, ವಿದ್ಯುತ್ ಖಾಸಗೀಕರಣದಿಂದ ದರ ಕಡಿಮೆಯಾಗುವುದು ಭ್ರಮೆಯಲ್ಲದೆ ಬೇರೇನೂ ಅಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಖಾಸಗೀಕರಣದ ನಂತರ ಸ್ಪರ್ಧೆಯ ಕಾರಣದಿಂದ ಶುಲ್ಕಗಳು ಕಡಿಮೆಯಾಗಿದೆಯೇ? ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ದಿನೇದಿನೇ ಏರಿಕೆ ಮಾಡಲಾಗುತ್ತಿದೆ. ಪೆಟ್ರೋಲ್ ನೂರರ ಗಡಿ ದಾಟಿದೆ. ಗ್ಯಾಸ್ ಬೆಲೆ ಸಾವಿರವನ್ನು ಸಮೀಪಿಸುತ್ತಿದೆ. ಅಡುಗೆ ಎಣ್ಣೆ, ಬೇಳೆಕಾಳುಗಳು, ಔಷಧಿ ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳೂ ಏರುತ್ತಿವೆ. ಇದೇ ಬಿಜೆಪಿ ಪಕ್ಷ ೨೦೧೨ರಲ್ಲಿ ಬೆಲೆ ಏರಿಕೆ ವಿರುದ್ಧ ಭಾರತ ಬಂದ್ ಗೆ ಕೂಡ ಕರೆ ನೀಡಿತ್ತು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗಳ ಮೇಲೆ ಸುಂಕ ಏರಿಕೆ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ೨೦೧೪ರಲ್ಲಿ ಪೆಟ್ರೋಲ್ ಮೇಲೆ ಇದ್ದ ಕೇಂದ್ರದ ಸುಂಕ ರೂ. ೯.೫೦ಗಳಾದರೆ ಈಗ ಅದು ರೂ. ೩೨.೯೦. ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಗಳ ಮೇಲೆ ಸಂಗ್ರಹಿಸಿರುವ ಸುಂಕ ಸುಮಾರು ರೂ. ೨೩ಲಕ್ಷ ಕೋಟಿಗಳು. (೨೩,೦೦,೦೦೦,೦೦,೦೦,೦೦೦)! ಇಂತಹ ದರೋಡೆ ನಡೆಸಿದ ಸರ್ಕಾರ ಕೋವಿಡ್ ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿದೆ. ವಿರೋಧಪಕ್ಷದ ಸ್ಥಾನದಲ್ಲಿರುವಾಗ ಕೇವಲ ಮತದಾರರ ಓಲೈಕೆಗಾಗಿ ಹೋರಾಟದ ನಾಟಕವಾಡುವ ಬಂಡವಾಳಶಾಹಿ ಏಜೆಂಟ್ ಪಕ್ಷಗಳಿಗೆ ಜನತೆ ಬುದ್ಧಿ ಕಲಿಸಲೇ ಬೇಕು ಎಂದರು.
ಚನ್ನಬಸವ ಜಾನೇಕಲ್ ಅವರು ಮಾತನಾಡಿ, ಸಾರ್ವಜನಿಕ ಸೊತ್ತುಗಳಾದ ರೈಲ್ವೆ, ಹೆದ್ದಾರಿ, ಬಂದರು, ವಿಮಾನ ನಿಲ್ದಾಣ, ವಿದ್ಯುಚ್ಛಕ್ತಿ, ಬಿಎಸ್ ಎಲ್ ಎನ್, ಗಣಿಗಳು ಮುಂತಾದವನ್ನು ೩೦-೪೦ ವರ್ಷಗಳ ದೀರ್ಘ ಅವಧಿಗೆ ಖಾಸಗಿಯವರಿಗೆ ನಿರ್ವಹಣೆಗೆ ನೀಡಿ ಅದರ ಮೂಲಕ ರೂ. ೬ ಲಕ್ಷ ಕೋಟಿಗಳನ್ನು ಸಂಗ್ರಹಿಸುವುದೇ ರಾಷ್ಟ್ರೀಯ ಸೊತ್ತುಗಳ ನಗದೀಕರಣ ಪೈಪ್ ಲೈನ್ (ಓಒP) ಯೋಜನೆ. ಪರಿಣಾಮವಾಗಿ ರೈಲು, ರಸ್ತೆ, ವಿದ್ಯುಚ್ಛಕ್ತಿ ಮುಂತಾದ ಜನಬಳಕೆಯ ಸೇವೆಗಳ ದರವನ್ನು ನಿರ್ವಹಣೆ ಮಾಡುವ ಕಂಪೆನಿಗಳೇ ನಿಗದಿ ಮಾಡುತ್ತವೆ. ಅಷ್ಟು ವರ್ಷಗಳ ಕಾಲ ಸರ್ಕಾರಕ್ಕೆ ನಿರಂತರವಾಗಿ ಆದಾಯ ಖೋತಾ ಆಗುತ್ತದೆ. ಇವುಗಳ ಪರಿಣಾಮಗಳ ಬಗ್ಗೆ ನಾವು ಪ್ರಶ್ನೆ ಮಾಡಬೇಕು ಎಂದರು. ಆದ್ದರಿಂದ ಈ ಹೋರಾಟ ಕೇವಲ ರೈತ ಹೋರಾಟವಲ್ಲ. ದಮನಕ್ಕೊಳಗಾಗಿರುವ ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆಯರೆಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕಾದ ಹೋರಾಟ. ಇಡೀ ಕರ್ನಾಟಕವನ್ನೇ ಸ್ತಬ್ಧಗೊಳಿಸಿ ಈ ಬಂದನ್ನು ಯಶಸ್ವಿಗೊಳಿಸಬೇಕು ಎಂದರು. ರೈತ ವಿರೋಧಿ, ಜನವಿರೋಧಿ ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಗೆ ತರಬೇಕು. ವಿದ್ಯುಚ್ಛಕ್ತಿ ತಿದ್ದುಪಡಿ ವಿಧೇಯಕ ೨೦೨೦ ವಾಪಸ್ ಪಡೆಯಬೇಕು.ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ನಗದೀಕರಣ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ಸಂಸ್ಥೆಗಳ ಮಾರಾಟ ನಿಲ್ಲಬೇಕು ಎಂದರು.
ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಸಂಜೆ ಬಸ್ ನಿಲ್ದಾಣ, ಜಾಕೀರ್ ಹುಸೇನ್ ವೃತ, ಭಗತ್ ಸಿಂಗ್ ಸರ್ಕಲ್, ನೇತಾಜಿ ವೃತ್ತ, ಗಂಜ್ ವೃತ, ಬಸವನಬಾವಿ ಸರ್ಕಲ್, ಚಂದ್ರಮೌಳೇಶ್ವರ ವೃತ, ಸ್ಟೇಷನ್ ಸರ್ಕಲ್ ಗಳಲ್ಲಿ ಪ್ರಚಾರ ಮಾಡಿ, ವ್ಯಾಪಾಸ್ಥರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸಾರ್ವಜನಿಕರಲ್ಲಿ ಕರಪತ್ರಗಳನ್ನು ನೀಡಿ ರಾಯಚೂರು ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು. ಬೀದಿಬದಿ ಸಭೆಗಳಲ್ಲಿ ಪಕ್ಷದ ಎನ್.ಎಸ್, ವೀರೇಶ್, ಮಹೇಶ್ ಚೀಕಲಪರ್ವಿ, ಚನ್ನಬಸವ ಜಾನೇಕಲ್, ರಾಮಣ್ಣ ಎಂ, ಮಲ್ಲನಗೌಡ, ಪೀರ್ ಸಾಬ್, ಕಾರ್ತಿಕ್, ವಿನೋದ್, ಅಂಬಾಜಿ, ನೂರ್ ಪಾಶಾ, ಅಣ್ಣಪ್ಪ ಮುಂತಾದವರು ಭಾಗವಹಿಸಿದ್ದರು.