ಭಾರತ್ ಬಂದ್: ಜನಜಾಗೃತಿಗಾಗಿ ಪ್ರಚಾರಾಂದೋಲನ

ದಾವಣಗೆರೆ,ಸೆ.25: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ರೈತ ಸಂಘಟನೆಗಳ ಒಕ್ಕೂಟ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರೈತ, ಕಾರ್ಮಿಕ ಸಂಘಟನೆಗಳು ನಗರದಲ್ಲಿಂದು ಪ್ರಚಾರಾಂದೋಲನ ನಡೆಸಿದವು.
ನಗರದ ಜಯದೇವ ವೃತ್ತದಿಂದ ಪ್ರಚಾರಾಂದೋಲನ ಆರಂಭಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ವಿವಿಧ ವೃತ್ತಗಳಿಗೆ ತೆರಳಿ ಪದಧಿಕಾರಿಗಳು ಮಾತನಾಡಿ ಸೆ.27ರಂದು ನಡೆಯುವ ಭಾರತ್ದ್ ಬಂದ್‌ಗೆ ನಾಗರಿಕರು, ವರ್ತಕರು, ಆಟೊ ಚಾಲಕರು, ಬಸ್ ಮಾಲೀಕರು, ಚಾಲಕರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಪ್ರಚಾರಾಂದೋಲನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ, ರೈತ ಮುಖಂಡ ತೆಜಸ್ವಿ ಪಟೇಲ್, ಕೇಂದ್ರ ಸರ್ಕಾರವು ಕಾರ್ಪೋರೇಟ್ ಪರವಾಗಿ ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ಜಾರಿಗೆ ತಂದು ದೇಶದ ಕೃಷಿಯನ್ನು ಬಂಡವಾಳಶಾಹಿ ಕಂಪನಿಗಳಿಗೆ ವಹಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ರದ್ದು ಪಡಿಸಬೇಕು. ರೈತ ಉತ್ಪನ್ನಗಳಿಗೆ ಸರ್ಕಾರ ನಿಗದಿ ಮಾಡುವ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಆವರೆಗೆರೆ ಚಂದ್ರು ಮಾತನಾಡಿ, ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟವು ಒಂದು ವರ್ಷಕ್ಕೆ ಸಮೀಪಿಸುತ್ತಾ ಬಂದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಿದೆ ನಿರ್ಲಕ್ಷಿಸುತ್ತಿದೆ. ಇದನ್ನು ವಿರೋಧಿಸಿ ಸೆ.27ರಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದ್ದು, ಈ ಬಂದ್‌ಗೆ ಸಾರ್ವಜನಿಕರು, ನಾಗರಿಕರು, ವಿದ್ಯಾರ್ಥಿಗಳು, ಯುವಜನರು ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಚಾರಾಂದೋಲನದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಆವರಗೆರೆ ಉಮೇಶ್, ರಾಘವೇಂದ್ರ ನಾಯರಿ, ಬಲ್ಲೂರು ರವಿಕುಮಾರ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮೌಲಾ ನಾಯ್ಕ, ಆವರಗೆರೆ ವಾಸು, ಕರಿಬಸಪ್ಪ, ಜಬೀನಾ ಖಾನಂ, ಮಧು ತೋಗಲೇರಿ, ಮಂಜುನಾಥ ಕುಕ್ಕುವಾಡ, ಭಾರತಿ, ನಾಗಜ್ಯೋತಿ, ಐರಣಿ ಚಂದ್ರು, ಆನಂದರಾಜ್, ಇ.ಶ್ರೀನಿವಾಸ್, ರಂಗನಾಥ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.