ಭಾರತ್ ಬಂದ್ ಗೆ ಕಾಂಗ್ರೆಸ್ ಬೆಂಬಲ: ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ

ಬೆಂಗಳೂರು, ಸೆ.27- ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಅವರು, ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕರಾಳ ಶಾಸನದ ವಿರುದ್ಧ ರೈತರು ರಾಜಧಾನಿ ದೆಹಲಿಯಲ್ಲಿ ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.‌ಆದರೆ ಕೇಂದ್ರ ಸರ್ಕಾರ ರೈತರ ಹೋರಾಟ ಹತ್ತಿಕ್ಕಲು ನಿರಂತರ ಪ್ರಯತ್ನ ನಡೆಸುತ್ತಿದೆ. ನ್ಯಾಯಯುತ ಬೇಡಿಕೆಗಳನ್ನು ಕೇಳುವ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಸ್ಥಿತಿಗೆ ಸ್ಪಷ್ಟ ನಿದರ್ಶನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹಿತರಕ್ಷಣೆಗಾಗಿ ದಶಕದ ಹಿಂದೆಯೇ ಭೂಸ್ವಾಧೀನ ಕಾಯ್ದೆಯನ್ನು ಯಪಿಎ ಸರ್ಕಾರ ಜಾರಿಗೆ ತಂದಿತ್ತು. ವಿರುದ್ದ ದಿಕ್ಕಿನಲ್ಲಿ ಆಡಳಿತ ನಡೆಸಿದ ಮೋದಿ ಸರ್ಕಾರ ಏಳು ವರ್ಷಗಳ ಅವಧಿಯಲ್ಲಿ ರೈತರ ಬದುಕನ್ನು ಅಸಹನೀಯಗೊಳಿಸಿದೆ ಟೀಕಿಸಿದರು.