ಭಾರತ್ ಬಂದ್‍ಗೆ ಬೆಂಬಲಿಸಿ ಪ್ರತಿಭಟನೆ

ಗಂಗಾವತಿ ಮಾ.27: ಕೇಂದ್ರ ಸರ್ಕಾರ ಖಾಸಗಿಕರಣ ನೀತಿ, ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆಯಲು ಒತ್ತಾಯಿಸಿ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‍ಗೆ ಬೆಂಬಲಿಸಿ, ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಶ್ರೀ ಕೃಷ್ಣದೇವರಾಯ ಸರ್ಕಲ್‍ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆಗಳ ಮುಖಂಡ ನಿರುಪಾದಿ ಬೆಣಕಲ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಜನ ವಿರೋಧಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರ ಪರವಾಗಿ ಇದ್ದಂತ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತ ವಿರೋಧಿ ನಡೆಯನ್ನು ತೋರಿಸುತ್ತಿದೆ. ಇನ್ನೂ ವಿದ್ಯುತ್ ಖಾಸಗಿಕರಣ ಮಾಡಲು ಸಹ ಮುಂದಾಗಿದೆ. ಸಾರ್ವಜನಿಕರ ಕ್ಷೇತ್ರಗಳನ್ನು ಖಾಸಗಿಕರಣ ಮಾಡುವುದರಿಂದ ಸಾರ್ವಜನಿಕರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಇನ್ನೂ ಬಡತನವನ್ನು ಎದುರಿಸುತ್ತಿರುವ ಕುಟುಂಬಗಳು ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿಯ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ, ಭಾರತ ಬಂದ್ ನಡೆಸಲು ಮುಂದಾಗಿದೆ. ಕೂಡಲೇ ಕೇಂದ್ರ ಎಚ್ಚೇತ್ತುಕೊಂಡು ಖಾಸಗಿಕರಣವನ್ನು ಕೈಬಿಟ್ಟು, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.
ಕಾರ್ಯಕರ್ತರಾದ ಲಕ್ಷ್ಮೀದೇವಿ, ಶಿವಣ್ಣ ಬೆಣಕಲ್, ಮರಿನಾಗಪ್ಪ, ಮಂಜುನಾಥ ಡಗ್ಗಿ, ಶ್ರೀನಿವಾಸ್, ಬಾಳಪ್ಪ, ಹನುಮಂತ ಮುಕ್ಕುಂಪಿ, ಕನಕಪ್ಪ, ನಾಗೇಶ ನಾಯಕ, ಹುಲಿಗೆಮ್ಮ, ದುರಗಮ್ಮ, ಸೋಮನಾಥ ಇದ್ದರು.