ಭಾರತ್ ಬಂದ್‍ಗೆ ಆಮ್ ಆದ್ಮಿ ಪಕ್ಷದ ಬೆಂಬಲ

ಕಲಬುರಗಿ:ಸೆ.25:ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಾರತ್ ಕಿಸಾನ್ ಮಹಾಸಭಾ ಹಾಗೂ ಹಲವಾರು ಕಾರ್ಮಿಕ ಸಂಘಗಳು ಸೆಪ್ಟೆಂಬರ್ 27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಆಮ್ ಆದ್ಮಿ ಪಕ್ಷವು ಬೆಂಬಲಿಸುತ್ತದೆ ಹಾಗೂ ಬಂದ್‍ನಲ್ಲಿ ಭಾಗವಹಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ಬಳ್ಳಾರಿ ಅವರು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮಂಜೂರು ಮಾಡಿದ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಮತ್ತು ಬೆಲೆ ಏರಿಕೆಯನ್ನು ವಿರೋಧಿಸಲು ಭಾರತ್ ಕಿಸಾನ್ ಮಹಾಸಭಾ ಮತ್ತು ಹಲವಾರು ರೈತ ಸಂಘಟನೆಗಳು ಕಳೆದ 8 ತಿಂಗಳಿಂದ ಹಲವಾರು ರೀತಿಯಲ್ಲಿ ರಸ್ತೆ ತಡೆ ಚಳುವಳಿ, ಸತ್ಯಾಗ್ರಹ, ಹೋರಾಟಗಳನ್ನು ಮಾಡುತ್ತಿದ್ದರೂ ಸಹ ಕೇಂದ್ರ ಸರ್ಕಾರ ಕಿವುಡರಂತೆ, ಮೂಕರಂತೆ ಕಣ್ಮುಚ್ಚಿ ಕುಳಿತಿದೆ. ಸರ್ಕಾರಕ್ಕೆ ರೈತರ ಕುರಿತು ಎಳ್ಳಷ್ಟು ಕಾಳಜಿ ಇಲ್ಲ. ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಹಾಗೂ ರೈತ ವಿರೋಧಿ ಮೂರು ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಭಾರತ್ ಬಂದ್ ಕರೆ ಕೊಟ್ಟಿದ್ದು ಬೆಂಬಲಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರಣ ಪಕ್ಷದ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು, ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು, ಎಲ್ಲ ಘಟಕಗಳ ಪದಾಧಿಕಾರಿಗಳು ಬಂದ್‍ಗೆ ಬೆಂಬಲಿಸಲು ಸೆಪ್ಟೆಂಬರ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಗತ್ ವೃತ್ತದಲ್ಲಿ ಹಾಜರಿರಬೇಕು. ಬಂದ್‍ಗೆ ಬೃಹತ್ ಪ್ರಮಾಣದಲ್ಲಿ ಬೆಂಬಲ ಸೂಚಿಸಬೇಕಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.