ಭಾರತ್ ಜೋಡೋ ನ್ಯಾಯಯಾತ್ರೆಗೆ ಅಡ್ಡಿ: ಕೈ ಆಕ್ರೋಶ

ಸಂಜೆವಾಣಿ ನ್ಯೂಸ್
ಮೈಸೂರು: ಜ.24:- ಅಸ್ಸಾಂ ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಅಡ್ಡಿ ಘಟನೆ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಮುಖಂಡರಿಂದ ಕಚೇರಿ ಮುಂಭಾಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಸರ್ಕಾರ ಮತ್ತು ಕೇಂದ್ರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಚಿವ ಈಶ್ವರ ಖಂಡ್ರೆ ಮಾತನಾಡಿ, ಗೂಂಡಾಗಳಿಗೆ ಬಾಡಿಗೆ ನೀಡಿ ಯಾತ್ರೆ ನಿಲ್ಲಿಸಲು ಯತ್ನಿಸಿದ್ದಾರೆ. ಯಾತ್ರೆಯಲ್ಲಿ ಮೋದಿ ಶ್ರೀರಾಮನಿಗೆ ಜೈಕಾರ ಕೂಗಿ ಪ್ರಚೋದಿಸಲು ಯತ್ನಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಲ್ಲ. ಬಿಜೆಪಿಯ ಯಾವುದೇ ಆಟ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಮಾಜದ ಎಲ್ಲರಿಗೂ ಸಮಾನತೆ, ಸೌಲಭ್ಯ, ನ್ಯಾಯ ದೊರೆತಾಗ ಮಾತ್ರ ರಾಮರಾಜ್ಯ ಆಗುತ್ತದೆ. ಆದರೆ, ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಯ ಮೇಲೆ ದಾಳಿ ನಡೆಯುತ್ತಿರುವಾಗ ನ್ಯಾಯ ಸಿಗಲು ಹೇಗೆ ಸಾಧ್ಯ, ರಾಮರಾಜ್ಯ ಆಗಲು ಹೇಗೆ ಸಾಧ್ಯ. ರಾಜಕೀಯ ಸ್ವಾರ್ಥಕ್ಕಾಗಿ ಇಂದು ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ಒಡೆಯಲಾಗುತ್ತಿದೆ. ಇದು ದೇಶದ ಸಮಗ್ರತೆ, ಸಾರ್ವಭೌಮತ್ವಕ್ಕೆ ಮಾರಕವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ರಾಹುಲ್ ಜೀ ಅವರ ನ್ಯಾಯ ಯಾತ್ರೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿ, ದಾಳಿ ಮಾಡುತ್ತಿರುವುದು ಅಕ್ಷಮ್ಯ ಮತ್ತು ಹೇಯ ಕೃತ್ಯ. ಇದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿದೆ. ಬಿಜೆಪಿ ಬಾಯಲ್ಲಿ ಶಾಂತಿ ಮಂತ್ರ ಪಠಿಸುತ್ತದೆ. ಬಗಲಲ್ಲಿ ದೊಣ್ಣೆ ಹಿಡಿದು ಹಲ್ಲೆಗೆ ಹೋಗುತ್ತದೆ. 25 ಬಿಜೆಪಿ ಕಾರ್ಯಕರ್ತರು ಬಡಿಗೆ ಹಿಡಿದು ತಮ್ಮ ನ್ಯಾಯ ಯಾತ್ರೆಯ ಬಸ್ ಹಿಂದೆ ಬಂದಿದ್ದರು ಎಂದು ನಾಗಾಂವ್‍ನಲ್ಲಿ ಸ್ವತಃ ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಜತೆಗೆ ಅಸ್ಸಾಂನ ಬಿಜೆಪಿ ಸರ್ಕಾರ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗದಂತೆ ಆ ರಾಜ್ಯದ ಜನತೆಗೆ ಬೆದರಿಕೆ ಹಾಕುತ್ತಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೋ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿದ್ದೇವೆಯೋ ಎಂದು ಅನುಮಾನ ಮೂಡುತ್ತದೆ ಎಂದು ಕಿಡಿ ಕಾರಿದರು.
ಬಿಜೆಪಿ ಬಾವುಟ ಹಿಡಿದು ಬಂದ ಗುಂಪು ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿದೆ. ಆದರೆ, ನ್ಯಾಯ ಯಾತ್ರೆ ನಿಲ್ಲುವುದಿಲ್ಲ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಮತ್ತು ನ್ಯಾಯಯಾತ್ರೆಗೆ ದೇಶಾದ್ಯಂತ ದೊರಕುತ್ತಿರುವ ಜನ ಬೆಂಬಲದಿಂದ ಬಿಜೆಪಿ ವಿಚಲಿತವಾಗಿದೆ. ಹೀಗಾಗಿಯೇ ಈ ರೀತಿ ದಾಳಿ ಮಾಡುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಪಕ್ಷಗಳಿಗೂ ಸಮಾನವಾದ ಅವಕಾಶ ಇರಬೇಕು ಎಂದು ಒತ್ತಾಯಿಸಿದರು.
ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯರನ್ನ ಟಿಕೀಸುವ ನೈತಿಕತೆ ಬಿಜೆಪಿಗೆ ಇಲ್ಲ. ಸಿಎಂ ಸಿದ್ದರಾಮಯ್ಯ ನಾಸ್ತಿಕರಾಗಿದ್ದರೆ ಅವರ ಕ್ಷೇತ್ರದಲ್ಲಿ ರಾಮಮಂದಿರ ಕಟ್ಟಿಸುತ್ತಿರಲಿಲ್ಲ. ಸಿದ್ದರಾಮಯ್ಯ ನಾನು ನಾಸ್ತಿಕ ಅಲ್ಲ, ಆಸ್ತಿಕ ಅಂತ ಅವರೇ ಹೇಳಿದ್ದಾರೆ. ಅವರು ನಾಸ್ತಿಕರಾಗಿದ್ದರೆ ದೇವಸ್ಥಾನಗಳಿಗೆ ಅನುದಾನ ನೀಡುತ್ತಿರಲಿಲ್ಲ. ರಾಜ್ಯದ ಅನೇಕ ದೇವಾಲಯಗಳಿಗೆ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ರಾಮ ನಮ್ಮ ಮನಸ್ಸಿನಲ್ಲಿದ್ದಾನೆ ಎಂದರು. ರಾಜ್ಯದಲ್ಲಿ ಡಿಸಿಎಂ ಆಯ್ಕೆ ವಿಚಾರವಾಗಿ ಮಾತನಾಡಿ, ಈ ಚರ್ಚೆ ಸದ್ಯ ಅಪ್ರಸ್ತುತ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ಹೇಳಿದ ಮೇಲೆ ಈಗ ಯಾರು ತುಟಿಕ್ ಪಿಟಿಕ್ ಅನ್ನುತಿಲ್ಲ. ಈಗಾಗಿ ಡಿಸಿಎಂ ಆಯ್ಕೆ ವಿಚಾರವೇ ಅಪ್ರಸ್ತುತ ಎಂದರು.
ಮೈಸೂರು ಭಾಗದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕುತ್ತೇವೆ ಎಂದು ಭರವಸೆ ನೀಡಿದರು. ಸಚಿವರಾದ ಬಳಿಕ ಕಾರ್ಯಾಧ್ಯಕ್ಷರಾಗಿ ಮುಂದುವರೆಯುತ್ತಿರುವ ವಿಚಾರ, ಕಾರ್ಯಾಧ್ಯಕ್ಷ ಸ್ಥಾನ ಬದಲಾಗಬಹುದು. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವರಾದ ಬಳಿಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲಿಕ್ಕೆ ಆಗುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಮೇಯರ್‍ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಈಶ್ವರ್ ಚಕ್ಕಡಿ, ನಾಗೇಶ್, ಶ್ರೀನಾಥ್‍ಬಾಬು, ಸಿ. ಬಸವೇಗೌಡ, ಸುಶ್ರುತ್ ಗೌಡ, ಸಿ.ಆನಂದ್, ಮಾದ್ಯಮ ವಕ್ತಾರ ಮಹೇಶ್, ಕೆ.ಎಸ್.ಸಣ್ಣಸ್ವಾಮಿ, ನಾಗೇಶ್, ಸೋಮಸುಂದರ್, ಡೆರಿ ವೆಂಕಟೇಶ್ ಸೇರಿ ಹಲವರು ಭಾಗವಹಿಸಿದ್ದರು.