ಭಾರತ್ ಜೋಡೊ ಯಾತ್ರೆ ಲಾಂಛನ ಬಿಡುಗಡೆ

ಬೆಂಗಳೂರು, ಆ. ೨೮- ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ್ ಜೋಡೊ ಯಾತ್ರೆಗೆ ರಾಜ್ಯ ಕಾಂಗ್ರೆಸ್ ಸಂಪೂರ್ಣ ತಯಾರಿ ನಡೆಸಿದ್ದು, ಇಂದು ಭಾರತ್ ಜೋಡೊ ಯಾತ್ರೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವ ಜಾರ್ಜ್ ಸೇರಿದಂತೆ ಪ್ರಮುಖ ನಾಯಕರುಗಳ ಉಪಸ್ಥಿತಿಯಲ್ಲಿ ಭಾರತ್ ಜೋಡೊ ಯಾತ್ರೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಲಾಂಛನ ಬಿಡುಗಡೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕದಲ್ಲಿ ಭಾರತ್ ಜೋಡೊ ಯಾತ್ರೆ ೨೧ ದಿನ ನಡೆಯಲಿದ್ದು, ಗುಂಡ್ಲುಪೇಟೆಯಿಂದ ರಾಯಚೂರುತನಕ ಈ ಯಾತ್ರೆ ಸಾಗಲಿದೆ ಎಂದರು.

ಭಾರತ್ ಜೋಡೊ ಕಾಂಗ್ರೆಸ್ ಯಾತ್ರೆಯ ಲಾಂಛನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಜಾರ್ಜ್ ಡಿ.ಜೆ. ಬಿಡುಗಡೆ ಮಾಡಿದರು.

ಇದು ಪಕ್ಷಾತೀತವಾದ ಕಾರ್ಯಕ್ರಮ. ಭಾರತವನ್ನು ಒಗ್ಗೂಡಿಸುವ ಯಾತ್ರೆ. ಎಲ್ಲರೂ ಈ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಈ ಯಾತ್ರೆ ದೇಶಕ್ಕೆ ಒಂದು ಟ್ರೆಂಡ್‌ಸೆಟ್ ಆಗಲಿದೆ. ದೇಶ ಸರ್ವಜನಾಂಗದ ಶಾಂತಿಯ ತೋಟ, ಇದರ ರಕ್ಷಣೆಗಾಗಿ ಯಾತ್ರೆ ಮಾಡುತ್ತಿದ್ದೇವೆ. ಹಾಗೆಯೇ ರೈತನ ಬದುಕು ಹಸನಾಗಬೇಕು. ಮಹಿಳಾ ಸಬಲೀಕರಣ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ, ಭ್ರಷ್ಟಾಚಾರರಹಿತ ಆಡಳಿತ, ಸೇರಿದಂತೆ ಪಂಚಸೂತ್ರಗಳನ್ನಿಟ್ಟುಕೊಂಡು ಈ ಯಾತ್ರೆ ಮಾಡಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ದೇಶದಲ್ಲಿ ಸಾಮರಸ್ಯ ಐಕ್ಯತೆಗೆ ಧಕ್ಕೆ ಬಂದಿದೆ. ಪ್ರಜಾಪ್ರಭುತ್ವಕ್ಕೆ ಹೊಡೆತಬಿದ್ದಿದೆ. ಧರ್ಮರಾಜಕಾರಣ ಜಾಸ್ತಿಯಾಗಿದೆ. ಹಾಗಾಗಿ, ಎಲ್ಲರಿಗೂ ಸಮಾನತೆ, ಬಹುತ್ವದ ಸಮಾಜ, ಎಲ್ಲ ಧರ್ಮಗಳ ಜತೆ ಸಮನ್ವಯತೆ ಇರಬೇಕು ಎಂದರು.
ಧರ್ಮ ಒಡೆಯುವ ಜಾತಿ ರಾಜಕಾರಣ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮತ್ತೆ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ನಾವೆಲ್ಲ ಅಣ್ಣ-ತಮ್ಮಂದಿರು, ನಾವೆಲ್ಲ ಭಾರತೀಯರು ಎಂಬ ವಾತಾವರಣ ನಿರ್ಮಿಸಬೇಕಿದೆ. ಇದಕ್ಕಾಗಿ ಈ ಯಾತ್ರೆ ಮಾಡುತ್ತಿದ್ದೇವೆ. ೩,೫೦೦ ಕಿ.ಮೀ ಈ ಪಾದಯಾತ್ರೆ ಕರ್ನಾಟಕದಲ್ಲಿ ೫೧೧ ಕಿ.ಮೀ ಕ್ರಮಿಸಲಿದೆ. ರಾಹುಲ್‌ಗಾಂಧಿ ಸೇರಿದಂತೆ ರಾಜ್ಯ ಹಾಗೂ ಬೇರೆ ರಾಜ್ಯಗಳ ನಾಯಕರುಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.