ಭಾರತ್ ಜೋಡೊ ಯಾತ್ರೆ ತಡೆಯಲು ಸಾಧ್ಯವಿಲ್ಲ

ಗುವಾಹಟಿ,ಜ.೧೯:ಯುವ ನಾಯಕ ರಾಹುಲ್‌ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅಸ್ಸಾಂ ಸರ್ಕಾರಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಲೋಕಸಭಾ ಚುನಾವಣೆಗೆ ಮುನ್ನ ೨ನೇ ಹಂತದ ಭಾರತ್ ಜೋಡೊ ನ್ಯಾಯಯಾತ್ರೆ ಅಸ್ಸಾಂನ ಮಂಜೂಲಿಯಲ್ಲಿ ಸಾಗುತ್ತಿದೆ. ಆದರೆ, ಯಾತ್ರೆಯ ಮಾರ್ಗಬದಲಾವಣೆಯಿಂದಾಗಿ ರಾಜ್ಯದ ಜೌರತ್ ನಗರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಯಾತ್ರೆ ಅನುಮತಿ ಪಡೆದ ಪ್ರಕಾರ ಕೆಬಿ ರಸ್ತೆಯತ್ತ ಸಾಗಬೇಕಾಗಿತ್ತು, ಈಗ ಮಾರ್ಗ ಬದಲಾಯಿಸಿ ಬೇರೆ ಮಾರ್ಗದಲ್ಲಿ ಯಾತ್ರೆ ನಡೆಯುತ್ತಿದೆ. ಜನರು ಏಕಾಏಕಿ ನುಗಿದ್ದರಿಂದ ನೂಕಾಟ, ತಲ್ಲಾಟ ಉಂಟಾಗಿ ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೌರತ್ ಸದರ್ ಪೊಲೀಸ್ ಠಾಣೆಯಲ್ಲಿ ಯಾತ್ರೆ ಹಾಗೂ ಮುಖ್ಯ ಆಯೋಜಕರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಭಾರತ್ ನ್ಯಾಯ ಯಾತ್ರೆಯು ಜಿಲ್ಲಾಡಳಿತದ ನಿಯಮಗಳನ್ನು ಅನುಸರಿಸಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ರಾಹುಲ್‌ಗಾಂಧಿ ಕೈಗೊಂಡಿರುವ ಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಅಸ್ಸಾಂ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೊ ನ್ಯಾಯಯಾತ್ರೆಗೆ ಜನರನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಹಿಮಂತ್‌ಬಿಸ್ವಾಶರ್ಮಾ ಹುನ್ನಾರ ನಡೆಸಿದ್ದಾರೆ. ಮುಂದಿನ ೭ ದಿನಗಳ ಕಾಲ ಯಾತ್ರೆ ಅಸ್ಸಾಂ ರಾಜ್ಯದಲ್ಲಿ ಸಾಗಲಿದೆ. ಸಾಧ್ಯವಾದರೆ ನಮ್ಮನ್ನು ಬಂಧಿಸಲಿ ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ನಾಯಕ ಗೌರವ್‌ಗೊಗೋಯ್ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಜತೆ ಅಸ್ಸಾಂ ರಾಜ್ಯದ ಜನರಿದ್ದಾರೆ. ಯಾವುದೇ ಎಫ್‌ಐಆರ್‌ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.