ಭಾರತೀಯ ಸೇನೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ:ಕರ್ನಲ್ ನಿಶಾಂತಶೆಟ್ಟಿ

ಬೀದರ ಜು.23: ಭಾರತೀಯ ಸೇನೆಯಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸೇನಾ ನೇಮಕಾತಿ ಕಚೇರಿ ಬೆಳಗಾಂವ ನಿರ್ದೇಶಕರಾದ ಕರ್ನಲ್ ನಿಶಾಂತ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಪೂಜ್ಯ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಭಾರತೀಯ ಸೇನೆಗೆ ವಿದ್ಯಾರ್ಥಿಗಳು ಸೇರಲು ಹೇಗೆ ತೈಯ್ಯಾರಿ ಮಾಡಿಕೊಳ್ಳಬೇಕು ಎಂದು ಉಪನ್ಯಾಸ ನೀಡಿ ಮಾತನಾಡಿದರು.

ದೇಶ ಸೇವೆ ಮಾಡಲು ತಮಗೊಂದು ಸದಾವಕಾಶವಿದ್ದು ಭಾರತೀಯ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿ ದೇಶ ಸೇವೆ ಮಾಡಬೇಕು ಮತ್ತು ಇದಕ್ಕೆ ಸೇರಬೇಕಾದರೆ ತಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ದಿನಾಲೂ ದೈಹಿಕ ಕಸರತ್ತಿನ ಜೊತೆಗೆ ಓದಿನ ಕಡೆಗೆ ಗಮನಹರಿಸಬೇಕು. ತಮ್ಮ ಜೀವನದಲ್ಲಿ ಮುಂದೆ ಬರಬೇಕಾದರೆ ಒಂದು ಗುರಿ ಇರಬೇಕು. ಸೇನೆಯಲ್ಲಿ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಇಲ್ಲಿ ನಾವೆಲ್ಲರೂ ಭಾರತೀಯರಾಗಿ ದೇಶ ಸೇವೆ ಮಾಡುತ್ತೇವೆ ಎಂದು ಹೇಳಿದರು.

ಡಿಸೆಂಬರ್ 5 ರಿಂದ 22 ರವರೆಗೆ ಬೀದರ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು, ಅದಕ್ಕೂ ಮುಂಚೆ ವಿದ್ಯಾರ್ಥಿಗಳು ಆಗಸ್ಟ್.1 ರಿಂದ 30 ರವರೆಗೆ ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಮೊಬೈಲ್ ನಂಬರ ಮತ್ತು ಇಮೇಲ್ ಐಡಿ ರಜಿಸ್ಟ್ರೇಷನ್ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ತಪ್ಪು ಮಾಹಿತಿಯನ್ನು ಅನ್‍ಲೈನ್‍ನಲ್ಲಿ ಸಲ್ಲಿಸಬಾರದು ಒಂದು ವೇಳೆ ಹಾಗೇ ಮಾಡಿದರೆ ತಮಗೆ ಜೀವನಪೂರ್ತಿ ಡಿಬಾರ್ ಮಾಡಲಾಗುತ್ತದೆ.

ಭಾರತೀಯ ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳು ತಮ್ಮ ಅರ್ಹತೆಯೊಂದೇ ಇಲ್ಲಿ ಮಾನದಂಡವಾಗಿರುತ್ತದೆ. ಯಾವುದೇ ಆಸೆ ಆಮೀಷಗಳಿಗೆ ಅವಕಾಶ ಇರುವುದಿಲ್ಲ. ಇಂತಹ ಆಮೀಷಗಳನ್ನು ಒಡ್ಡಿ ಯಾರಾದರೂ ತಮಗೆ ಮೋಸ ಮಾಡುವವರು ಇರುವುದರಿಂದ ತಾವುಗಳು ಜಾಗೃತೆ ವಹಿಸಬೇಕು, ನಮ್ಮಲ್ಲಿ ಹಣ ತೆಗೆದುಕೊಂಡು ಆಯ್ಕೆ ಮಾಡುವುದಿಲ್ಲ ತಮ್ಮ ಅರ್ಹತೆಯೊಂದೆ ಇಲ್ಲಿ ಮಾನದಂಡವಾಗಿರುತ್ತದೆ ಎಂದರು.

ಈ ಹಿಂದೆ ಬೀದರ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ಹಮ್ಮಿಕೊಂಡಾಗ ಕಡಿಮೆ ಸಂಖ್ಯೆಯಲ್ಲಿ ಬೀದರ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಈ ವರ್ಷ ನಡೆಯುವ ಈ ರ್ಯಾಲಿಯಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಸೇನೆಗೆ ಆಯ್ಕೆ ಆಗಲು ಅದಕ್ಕೆ ಪೂರ್ವ ತೈಯ್ಯಾರಿಯನ್ನು ವಿದ್ಯಾರ್ಥಿಗಳು ಈಗಿನಿಂದಲೇ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾಂವ ಸೇನಾ ವಿಭಾಗದ ಸುಬೇಂದ್ರ ಮೇಜರ್ ರಾಜೇಂದ್ರಸಿಂಗ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಎಂ.ಶಹಾಬಾದಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಸೇನೆಯ ಹವಲ್ದಾರ ಮುತ್ತು ಕುಮಾರ, ರೋವರ್ಸ್ ಮತ್ತು ರೇಂಜರ್ಸನ್ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.