ಭಾರತೀಯ ಸೇನಾ ದಿನ

ಭಾರತದಲ್ಲಿ ಸೇನಾ ದಿನ
ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ.

ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ಇವರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು ಸುಖವಾಗಿ ನಿದ್ರೆ ಮಾಡುವಂತಾಗಿದೆ. ನಮ್ಮ ದೇಶ ಮಾತ್ರವಲ್ಲ, ಇತರ ಎಲ್ಲಾ ದೇಶಗಳಲ್ಲೂ ಸೇನೆ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ನಮ್ಮ ದೇಶದಲ್ಲಿ ಈ ಸೇನಾಪಡೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ನಮ್ಮ ದೇಶವನ್ನು ರಕ್ಷಿಸಿದೆ. ಹಲವಾರು ಪ್ರಕೃತಿ ವಿಕೋಪಗಳಲ್ಲಿ ಜನರನ್ನು ಕಾಪಾಡಿದೆ. ಇಂಥ ಸೇನೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಭಾರತದಲ್ಲಿ ಈ ಸೈನಿಕರಿಗಾಗಿಯೇ ಒಂದು ದಿನವನ್ನು ಮೀಸಲಾಗಿರಿಸಲಾಗಿದೆ. ಅದುವೇ ಜನವರಿ 15. ಈ ದಿನವನ್ನು ಪ್ರತಿವರ್ಷ ಆರ್ಮಿ ಡೇ ಅಥವಾ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ.

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿದ್ದು, ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಆದರೆ 1949ರ ಜನವರಿ 15ರಂದು ಮೊದಲ ಬಾರಿಗೆ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಕೆ. ಎಂ.ಕಾರ್ಯಪ್ಪ ಅಧಿಕಾರ ವಹಿಸಿಕೊಂಡರು. ಅಂದು ಫ್ರಾನ್ಸಿಸ್ ಬಟ್ಚರ್ ಕೆ ಎಂ ಕಾರ್ಯಪ್ಪನವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ರಿಟಿಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರವಾದ ದಿನವು ಭಾರತೀಯ ಇತಿಹಾಸದಲ್ಲಿ ಮಹತ್ವ ಪಡೆದುಕೊಂಡಿದ್ದು, ಇದರ ಜ್ಞಾಪಕಾರ್ಥವಾಗಿ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ದಿನದಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.

1895ರ ಏಪ್ರಿಲ್ 1ರಂದೇ ಭಾರತೀಯ ಸೇನೆ ಅಸ್ತಿತ್ವಕ್ಕೆ ಬಂದಿದ್ದರೂ ಸ್ವಾತಂತ್ರ್ಯಾನಂತರ ತನ್ನ ಮೊದಲ ಕಮಾಂಡರ್ ಇನ್ ಚೀಫ್ ಅನ್ನು ಹೊಂದಿದ್ದು 1949ರ ಜನವರಿ 15ರಂದು. ಹೀಗಾಗಿ ಇದೇ ದಿನವನ್ನು ಸೇನಾ ದಿನವಾಗಿ ಆಚರಿಸಲಾಗುತ್ತಿದೆ.

ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಪಥಸಂಚಲನ, ವೈಮಾನಿಕ ಕಸರತ್ತು ಪ್ರದರ್ಶನ, ಯೋಧರಿಂದ ಬೈಕ್ ಸ್ಟಂಟ್‌ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಖ್ಯ ಪಥಸಂಚಲನ ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆಯುತ್ತದಲ್ಲದೆ, ಶೌರ್ಯ ಪ್ರಶಸ್ತಿ, ಸೇನಾ ಮೆಡಲ್‌ಗಳನ್ನೂ ಇದೇ ಸಂದರ್ಭದಲ್ಲಿ ವಿತರಿಸಲಾಗುತ್ತದೆ. ದೆಹಲಿಯ ಇಂಡಿಯಾಗೇಟ್‌ನಲ್ಲಿರುವ ‘ಅಮರ್ ಜವಾನ್ ಜ್ಯೋತಿ’ಗೆ ಗೌರವ ಸಲ್ಲಿಸಲಾಗುತ್ತದೆ.‌

ಸ್ವಾತಂತ್ರ್ಯ ಭಾರತದ ಘನತೆ, ಗೌರವ ಮತ್ತು ಸುರಕ್ಷತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಭಾರತೀಯ ಸೇನಾ ಯೋಧರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ದೇಶದ ಎಲ್ಲಾ ಸೇನಾ ಕೇಂದ್ರ ಕಚೇರಿಗಳಲ್ಲಿ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಈ ದಿನವನ್ನು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ.