ಭಾರತೀಯ ಸಮಾಜವಾದದ ಮೇರು ವ್ಯಕ್ತಿ ರಾಮ ಮನೋಹರ ಲೋಹಿಯಾ

ಕಲಬುರಗಿ,ಮಾ.23:ದೇಶದ ಪ್ರಮುಖ ಸಮಸ್ಯೆಗಳಾದ ಬಡತನ, ನಿರುದ್ಯೊಗ, ಜಾತಿಯತೆಯಂತಹ ಮುಂತಾದ ಸಮಸ್ಯೆಗಳ ನಿರ್ಮೂಲನೆಗೆ ನಿರಂತರವಾಗಿ ಪ್ರಯತ್ನಿಸಿ, ದೇಶಕ್ಕೆ ಸಮಾನತೆಯ ಆಧಾರದ ಮೇಲೆ ಸಮಾಜ ನಿರ್ಮಾಣದ ನೀತಿ ಅನುಷ್ಠಾನಕ್ಕೆ ಶ್ರಮಿಸಿದ ರಾಮ ಮನೋಹರ ಲೋಹಿಯಾ ಅವರು ದೇಶದ ಸಮಾಜವಾದದ ಮೇರು ವ್ಯಕ್ತಿ ಹಾಗೂ ಮಹಾನ ನಾಯಕರಾಗಿದ್ದಾರೆಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಮ ಮನೋಹರ ಲೋಹಿಯಾ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಶ್ರಮ ಸಾಂಧ್ರ ಬಂಡವಾಳದಿಂದ ನಿರುದ್ಯೋಗ ನಿವಾರಣೆಯಾಗುತ್ತದೆ, ಗರಿಷ್ಠ ಸಮಾನತೆಗಾಗಿ ಆರ್ಥಿಕ ಚಟುವಟಿಕೆಗಳ ರಾಷ್ಟ್ರೀಕರಣವಾಗಬೇಕು, ವಿಕೇಂದ್ರಿಕೃತ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು, ಮಹಿಳಾ ಸಬಲೀಕರಣವಾಗಬೇಕು, ಭೂ ವಿತರಣೆ ಆಗಬೇಕು, ಕೈಗಾರಿಕಾ ಉತ್ಪನ್ನ ಬೆಲೆಗಳೊಂದಿಗೆ ಕೃಷಿ ಉತ್ಪನ್ನ ಬೆಲೆಗಳ ಸಮನ್ವಯತೆ ಮಾಡಬೇಕೆಂಬ ಲೋಹಿಯಾ ತತ್ವಗಳು ಪ್ರಸ್ತುತವಾಗಿವೆಯೆಂದರು.
ಚಿಂತಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಲೋಹಿಯಾ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮ-ಸಮಾಜಪರ ಲೇಖಕರಾಗಿ, ಹಿಂದು ಮತ್ತು ಮುಸ್ಲಿಂ ಧರ್ಮದ ನಡುವೆ ಉಂಟಾಗಿದ್ದ ಬಿರುಕನ್ನು ಸರಿಪಡಿಸಲು ಶ್ರಮಿಸುವ ಮೂಲಕ ಸಾಮರಸ್ಯದ ರೂವಾರಿಯಾಗಿ ಸಾಕಷ್ಟು ಶ್ರಮಿಸಿದ್ದಾರೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಣ್ಣಾರಾಯ ಎಚ್.ಮಂಗಾಣೆ, ಬಸವರಾಜ ಎಸ್.ಪುರಾಣೆ, ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ಎಸ್.ಸ್.ಪಾಟೀಲ ಬಡದಾಳ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.