ಭಾರತೀಯ ಸಂಸ್ಕೃತಿಯನ್ನು ಐರೋಪ್ಯ ರಾಷ್ಟ್ರಗಳಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜ.13: ಭಾರತ ಮತ್ತು ಭಾರತದ ಸಂಸ್ಕೃತಿಯನ್ನು  ಐರೋಪ್ಯ ರಾಷ್ಟ್ರಗಳ ಜೊತೆ ಜೊತೆಗೆ  ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಹ.ಬೊ.ಹಳ್ಳಿಯ ಜಿ.ಪಿ.ವಿ.ಪಿ. ಸ.ಪ್ರ.ದ.ಕಾಲೇಜಿನ ಉಪನ್ಯಾಸಕ ಡಾ.ಸತೀಶ್ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸ.ಪ.ಪೂ.ಕಾಲೇಜಿನಲ್ಲಿ ಮರಿಯಮ್ಮನಹಳ್ಳಿಯ   ಕನ್ನಡ ಸಾಹಿತ್ಯ ಪರಿಷತ್ತು  ಹೋಬಳಿ ಘಟಕದವರು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸ್ವಾಮಿ ವಿವೇಕನಂದರು ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ರಾಜಯೋಗ, ಧರ್ಮ ಯೋಗದಂತಹ ಯೋಗ ಮಾರ್ಗಗಳ ಮೂಲಕ ಜಗತ್ತಿಗೆ ಹಿಂದೂ ಧರ್ಮದ ಘನತೆಯನ್ನು ಎತ್ತಿ ಹಿಡಿದರು. ದೇಶದ ಬದಲಾವಣೆಗೆ ಶಿಕ್ಷಣ ಮತ್ತು ಧರ್ಮದ ಅವಶ್ಯಕತೆ ಬಹು ಮುಖ್ಯವಾಗಿದೆ. ಶಿಕ್ಷಣದಿಂದ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿಯೂ ಸಧೃಡರಾಗುತ್ತೇವೆ. ಧರ್ಮವು ಕೂಡ ಮನುಷ್ಯರನ್ನು ಒಳಿತಿನೆಡೆಗೆ ಕರೆದೊಯ್ಯುತ್ತದೆ ಎಂದರು. ಜ್ಞಾನವು ಒಬ್ಬರ ಒಳಿತಿಗೆ ಬಳಕೆಯಾಗದೇ ಸಮುದಾಯದ ಒಳಿತಿಗೆ ಬಳಕೆಯಾಗಬೇಕಿದೆ. ಸಮುದಾಯದ ಹಿತ ತುಂಬಾ ಮುಖ್ಯವಾಗುವುದು ಎಂದರು.
ಕ.ಸಾ.ಪ.ಹೋಬಳಿ ಅಧ್ಯಕ್ಷ ಬಿ.ಎಂ.ಎಸ್.ಮೃತ್ಯುಂಜಯ ಮಾತನಾಡಿ, ಯುವಕರಿಗೆ ಸ್ವಾಮಿ ವಿವೇಕಾನಂದರು ಮಾದರಿಯಾದವರು, ಯುವಕರು ಕೇವಲ ಅಕ್ಷರ ಜ್ಞಾನಕ್ಕೆ ಮೊರೆ ಹೋಗದೆ, ಸಂಸ್ಕೃತಿಯ ಪರಿಚಾರಕರಾಗುವುದು ಅವರ ಗುರಿಯಾಗ ಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎನ್.ಎನ್.ಧರ್ಮಾಯತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಡಿ.ಶ್ರೀನಿವಾಸ ಶೆಟ್ಟಿ, ಕ.ಸಾ.ಪ. ಮಹಿಳಾ ಪ್ರತಿನಿಧಿ ವೀಣಾ ಶ್ರೀನಿವಾಸಶೆಟ್ಟಿ, ಹಿರಿಯ ಉಪನ್ಯಾಸಕ ಎನ್.ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕ.ಸಾ.ಪ. ಹೋಬಳಿ ಕಾರ್ಯದರ್ಶಿ ಬಿ.ಪರಶುರಾಮ ನಾಯಕ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಹಿರಿಯ ಉಪನ್ಯಾಸಕ ಸಿದ್ದರಾಮಯ್ಯ ವಂದಿಸಿದರು. ಉಪನ್ಯಾಸಕ ಎನ್. ಪ್ರಶಾಂತ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕ.ಸಾ.ಪ. ಕೋಶಾಧಿಕಾರಿ ಈ.ರಮೇಶ್ ಬ್ಯಾಲಕುಂದಿ, ಜಿ.ಮಲ್ಲಪ್ಪ, ಸಿ.ಆರ್.ಗಾಳೇಶ, ಬಿ.ರಘುರಾಮ ಹಾಗೂ ಇತರರು ಇದ್ದರು.