ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕಾ ಆಘಾತ

ವಾಷಿಂಗ್ಟನ್,ಆ.೧೮-ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಕೆಲ ಭಾರತೀಯ ವಿದ್ಯಾರ್ಥಿಗಳಿಗೆ ಅಮೇರಿಕಾ ಸರ್ಕಾರ ಅನಿರೀಕ್ಷಿತ ಆಘಾತ ನೀಡಿದೆ.
ಒಟ್ಟು ೨೧ ಜನರನ್ನು ವಿಮಾನ ನಿಲ್ದಾಣದಿಂದ ಹಿಂತಿರುಗುವ ವಿಮಾನಗಳಲ್ಲಿ ವಾಪಸ್ ಕಳುಹಿಸಲಾಗಿದೆ. ಇವರಲ್ಲಿ ಬಹುತೇಕರು ಆಂಧ್ರ ರಾಜ್ಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಗುರುವಾರ ಅಟ್ಲಾಂಟಾ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಚಿಕಾಗೋ ವಿಮಾನ ನಿಲ್ದಾಣಗಳಿಗೆ ಬಂದ ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷಿಸಲಾಯಿತು. ಈ ಕ್ರಮದಲ್ಲಿ ಕೆಲವರ ಮೇಲೆ ಶಂಕೆ ವ್ಯಕ್ತವಾಗಿದ್ದು, ಅವರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಗತಿಗಳು, ದೂರವಾಣಿ ಸಂಖ್ಯೆಗಳು, ಮೇಲ್‌ಗಳು, ಕನ್ಸಲ್ಟೆನ್ಸಿಗಳು ಮತ್ತು ಅವರು ಪ್ರವೇಶ ಪಡೆದ ವಿಶ್ವವಿದ್ಯಾಲಯಗಳಲ್ಲಿನ ಶುಲ್ಕಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಕೊನೆಗೆ ಕೆಲವರ ದಾಖಲೆಗಳಲ್ಲಿ ವಿವರ ಸರಿ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ. ತಿರಸ್ಕೃತಗೊಂಡವರು ಮತ್ತೆ ಐದು ವರ್ಷಗಳವರೆಗೆ ಅಮೆರಿಕದ ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.