ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಿಳಿನೆಲೆ ಗ್ರಾಮದ ಮಧುಕುಮಾರ್ ಎರ್ಮಾಯಿಲ್, ದಿವ್ಯಪ್ರಕಾಶ್, ರಮೇಶ್‌ಗೆ ನಿವೃತ್ತಿ

ಕಡಬ, ಎ.೧- ಬಿಳಿನೆಲೆ ಗ್ರಾಮದ ಮಧುಕುಮಾರ್ ಎರ್ಮಾಯಿಲ್, ದಿವ್ಯಪ್ರಕಾಶ್ ಎ. ಹಾಗೂ ರಮೇಶ್ ಎಲ್. ಸಣ್ಣಾರ ಅವರು ಭಾರತೀಯ ಭೂ ಸೇನೆಗೆ ಒಂದೇ ದಿನ ಸೇರ್ಪಡೆಯಾಗಿ ಯೋಧರಾಗಿ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾ. ೩೧ ರಂದು ಒಟ್ಟಿಗೇ ಸೇವೆಯಿಂದ ನಿವೃತ್ತರಾಗಿ ಸ್ವ ಗ್ರಾಮಕ್ಕೆ ಮರಳಲಿದ್ದಾರೆ.

ಮಧುಕುಮಾರ: ಬಿಳಿನೆಲೆ ಗ್ರಾಮದ ಎರ್ಮಾಯಿಲ್ ನಿವಾಸಿ ಮಧುಕುಮಾರ ಅವರು  ಭಾರತೀಯ ಭೂ ಸೇನೆಗೆ ೨೦೦೪ ರಲ್ಲಿ  ಯೋಧರಾಗಿ ಸೇರ್ಪಡೆಗೊಂಡು ಲೇಹ್ ಲಢಾಕ್, ಜೋಧ್‌ಪುರ್, ಸಿಕಂದರಾಬಾದ್, ಜಮ್ಮು-ಕಾಶ್ಮೀರ, ಸಂಸತ್ ಭವನ ಸೇರಿದಂತೆ ದೇಶದ ವಿವಿದೆಡೆ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ,  ಪಠಾಣ್‌ಕೋಟ್ ಕಾರ್ಯಾಚರಣೆ ಸೇರಿದಂತೆ ಹಲವು ಕ್ಲಿಷ್ಟಕರ ಸೇನಾ ಕಾರ್ಯಾಚರಣೆಗಳಲ್ಲಿ  ಭಾಗವಹಿಸಿದ ಹೆಮ್ಮೆಯೊಂದಿಗೆ  ಮಾ. ೩೧ ರಂದು ಸೇವಾ ನಿವೃತ್ತಿ ಪಡೆದಿದ್ದಾರೆ. 

ದಿವ್ಯಪ್ರಕಾಶ್ ಎ.: ಬಿಳಿನೆಲೆ ಗ್ರಾಮದ ದಿವ್ಯಪ್ರಕಾಶ್ ಎ. ಅವರು ೨೦೦೪ ರಲ್ಲಿ  ಭಾರತೀಯ ಭೂ ಸೇನೆಗೆ ಯೋಧರಾಗಿ ಸೇರ್ಪಡೆಗೊಂಡು ಪಂಜಾಬ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಣಿಪುರ್, ಅರುಣಾಚಲ ಪ್ರದೇಶ್ ಸೇರಿದಂತೆ ದೇಶದ ವಿವಿದೆಡೆ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾ. ೩೧ ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.

ರಮೇಶ್ ಎಲ್.ಸಣ್ಣಾರ: ಬಿಳಿನೆಲೆ ಗ್ರಾಮದ ಸಣ್ಣಾರ ನಿವಾಸಿ ರಮೇಶ್ ಎಲ್.ಸಣ್ಣಾರ ಅವರು ೨೦೦೪ ರಲ್ಲಿ  ಭಾರತೀಯ ಭೂ ಸೇನೆಗೆ ಯೋಧರಾಗಿ ಸೇರ್ಪಡೆಗೊಂಡು ಝಾರ್ಖಂಡ್, ಪಂಜಾಬ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ದೇಶದ ವಿವಿದೆಡೆ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾ. ೩೧ ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.