ಭಾರತೀಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮಧುಗಿರಿ, ಸೆ. ೨೫- ತಾಲ್ಲೂಕಿನಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಪ್ರಕಾಶ್ ಬಿರೆವಾರ ಅವರ ಸೂಚನೆಯಂತೆ ತುಮಕೂರು ಜಿಲ್ಲಾಧ್ಯಕ್ಷ ಎಂ.ಸಿ. ಶಿವಕುಮಾರ್ ಹಾಗೂ ಜಿಲ್ಲಾ ಸಂಚಾಲಕರಾದ ದೊಡ್ಡೇರಿ ಮಹಾಲಿಂಗಯ್ಯ ರವರ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ಜನಕಲೋಟಿ ಬೆಟ್ಟರಾಜು ಜೆ.ಡಿ., ಉಪಾಧ್ಯಕ್ಷರಾಗಿ ನಾಗೇನಹಳ್ಳಿ ಸುನಿಲ್‌ಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಐ.ಡಿ.ಹಳ್ಳಿ ಯುವರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಪುರವರ ಹನುಮಂತರಾಯಪ್ಪ, ಗೌರವ ಉಪಾಧ್ಯಕ್ಷರಾಗಿ ಸಿಡದರಗಲ್ಲು ನಾಗರಾಜ್, ಸಂಘಟನಾ ಸಂಚಾಲಕರಾಗಿ ಚಂದ್ರಗಿರಿ ಮಂಜುನಾಥ್, ಸಂಘಟನಾ ಸಂಚಾಲಕರಾಗಿ ಹೊಸಕೆರೆ ಗಿರೀಶ್, ಕಾರ್ಯದರ್ಶಿಯಾಗಿ ಸುದ್ದಗುಂಟೆ ನಾಗರಾಜು, ಕಾರ್ಯದರ್ಶಿಯಾಗಿ ರೆಡ್ಡಿಹಳ್ಳಿ ಚಂದ್ರಕುಮಾರ್, ರವಿಕುಮಾರ್ ಐ.ಡಿ.ಹಳ್ಳಿ, ಸಂಘಟನಾಕಾರರಾಗಿ ನವೀನ್ ಆರ್.ಟಿ, ಸಂಚಾಲಕರಾಗಿ ಗರಣಿ ಗಿರೀಶ್, ಮಾದೇನಹಳ್ಳಿ ಹನುಮಂತರಾಜುರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಸಿ. ಶಿವಕುಮಾರ್, ಮಧುಗಿರಿ ತಾಲ್ಲೂಕಿನಲ್ಲಿ ದಲಿತ ಜನಾಂಗದವರು ಹೆಚ್ಚು ಜನಸಂಖ್ಯೆ ಹೊಂದಿದ್ದು, ಕ್ಷೇತ್ರದಲ್ಲಿ ದಲಿತರ ಅಭಿವೃದ್ಧಿಗಾಗಿ ನಮ್ಮ ಸಮಿತಿ ಪದಾಧಿಕಾರಿಗಳು ಕ್ಷಮಿಸಬೇಕು. ಬಡವರಿಗೆ, ರೈತರಿಗೆ ಅನ್ಯಾಯವಾದಾಗ ಖಂಡಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದರು.
ನೂತನ ತಾಲ್ಲೂಕು ಅಧ್ಯಕ್ಷ ಜನಕಲೋಟಿ ಬೆಟ್ಟರಾಜು ಮಾತನಾಡಿ, ತಾಲ್ಲೂಕಿನಲ್ಲಿ ಅಧಿಕಾರಿಗಳು ದಲಿತರ ಪರ ಕೆಲಸ ಮಾಡುತ್ತಿಲ್ಲ. ಮಧುಗಿರಿ ಬರಪೀಡಿತ ಪ್ರದೇಶವಾಗಿದೆ. ಮಳೆರಾಯನ ಕೈಕೊಟ್ಟಿದೆ. ರೈತರಿಗೆ ಈ ಬಾರಿ ಬೆಳೆ ವಿಮೆ ಕೊಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಎಸ್ಸಿಪಿ-ಟಿಎಸ್‌ಪಿ ಯೋಜನೆ ಅಡಿಯಲ್ಲಿ ಕೆಲಸ ಕಾರ್ಯಗಳು ದಲಿತ ಕಾಲೋನಿಗಳಲ್ಲಿ ಆಗದೆ ಬೇರೆ ಬೇರೆ ಸವರ್ಣೀಯರ ಏರಿಯಾಗಳಲ್ಲಿ ಕೆಲಸ ಮಾಡಿರುವ ಆರೋಪಗಳು ಬಂದಿದೆ. ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಕೆಲಸ ಎಂದು ಪದಾಧಿಕಾರಿಗಳನ್ನು ಎಚ್ಚರಿಸಿದರು.
ತಾಲ್ಲೂಕಿನ ಸಂಘಟನಾ ಪ್ರಧಾನ ಕಾರ್ಯದರ್ಶಿ ಐ.ಡಿ.ಹಳ್ಳಿ ಯುವರಾಜ್ ಮಾತನಾಡಿ, ಕ್ಷೇತ್ರದಲ್ಲಿ ಹಲವಾರು ದಲಿತ ಜನಾಂಗದವರಿದ್ದು, ದಲಿತರ ಅಭಿವೃದ್ಧಿಗಾಗಿ ಶ್ರಮಿಸಬೇಕು. ದಲಿತರಿಗೆ ಅನ್ಯಾಯವಾದಾಗ ಖಂಡಿಸುವುದು ನಮ್ಮ ಜವಾಬ್ದಾರಿ. ಆದರೆ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಗಳು ದಲಿತರ ಕುಂದು-ಕೊರತೆಗಳ ಸಭೆಗೆ ಮಾಹಿತಿ ನೀಡುತ್ತಿಲ್ಲ. ದಲಿತರು ದೂರುಗಳನ್ನು ಕೊಡಲು ಹೋದರೆ ಅಟ್ರಾಸಿಟಿ ಕೇಸ್ ಮಾಡದೆ ಅದರ ವಿರುದ್ಧವಾಗಿ ಕೌಂಟರ್ ಕೇಸ್‌ಗಳನ್ನು ಮಾಡುತ್ತಿದ್ದು, ಪದವಿ ಮಾಡಿದ ವಿದ್ಯಾರ್ಥಿಗಳನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತಿದ್ದಾರೆ ಎಂದು ಖಂಡಿಸಿದರು.