
ರಾಯಚೂರು,ಏ.೧೬-ವಿಧಾನಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಭಾರತೀಯ ಜನತಾ ಪಕ್ಷಕ್ಕೆ ಜನರ ಆಶೀರ್ವಾದದ ಬಲವಿದೆ, ಸಮರ್ಥವಾದ ಕಾರ್ಯಕರ್ತರ ದೊಡ್ಡ ಬೆಂಬಲವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಗರದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು.
ಪಕ್ಷದಲ್ಲಿ ಬದಲಾವಣೆ ತರಬೇಕು ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಯಚೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಹೇಳಿದರು.
ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸುತ್ತಿದ್ದಂತೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಕ್ಷ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಈ ನಿಟ್ಟಿನಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಯಾರಿಗೆ ಟಿಕೆಟ್ ಕೊಡಬಾರದು ಎನ್ನುವ ಬಗ್ಗೆ ಸರ್ವೆ ಮುಖಾಂತರ ಈ ನಿರ್ಧಾರ ಪಡೆಯಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರು, ಈಶ್ವರಪ್ಪ ಕ್ಷೇತ್ರ ಬಿಟ್ಟುಕೊಟ್ಟರು, ಆನಂದ್ ಸಿಂಗ್ ಸೇರಿದಂತೆ ಸಾಕಷ್ಟು ಬದಲಾವಣೆಗಳು ಆಗಿವೆ. ಅವು ಸ್ವಯಂ ಪ್ರೇರಣೆಯಿಂದ ಬದಲಾವಣೆಯಾಗಿದೆ, ಇನ್ನು ಕೆಲವನ್ನ ಪಕ್ಷ ಅಪೇಕ್ಷಿಸಿದೆ ಎಂದು ಹೇಳಿದರು.
ಪಕ್ಷದಲ್ಲಿ ಹಿರಿಯ ನಾಯಕರ ಮೇಲೆ ಗೌರವ ಇದೆ, ಅದರಲ್ಲೂ ಜಗದೀಶ್ ಶೆಟ್ಟರ್ ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಸಿಗಲಿದೆ ಎಂದರು. ಪಕ್ಷ ಜನ ಬೆಂಬಲ ಮತ್ತು ಕಾರ್ಯಕರ್ತರಿಂದ ಇದೆ. ಮತ್ತೆ ಗೆಲುವಿಗಾಗಿ ಏನೆಲ್ಲ ಮಾಡಬೇಕಾಗಿದೆ. ಅದನ್ನ ಮಾಡುತ್ತಿದ್ದೇವೆ.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಜಡತ್ವ ಇದೆ ಯಾವೊಂದು ನಾಯಕರನ್ನು ಬದಲಾವಣೆ ಮಾಡಲು ಆಗಿಲ್ಲ ಎಂದು ಹೇಳಿದರು.
ಇಂದು ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ ರಾಜ್ಯ ಸರ್ಕಾರ ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ಜಾರಿಗೋಳಿಸಿದಕ್ಕಾಗಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಎ. ನಾರಾಯಣ ಸ್ವಾಮಿ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ನಗರ ಶಾಸಕ ಶಿವರಾಜ ಪಾಟೀಲ್,ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.