ಭಾರತೀಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಬಿಪಿನ್ ಚಂದ್ರಪಾಲ್

ಕಲಬುರಗಿ,ನ.9: ಅಪ್ಪಟ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಲೇಖಕ, ಸ್ವದೇಶಿ ಚಳುವಳಿಯ ನಾಯಕ, ಪ್ರಖರ ವಾಗ್ಮಿಗಳಾಗಿದ್ದ ಬಿಪಿನ್ ಚಂದ್ರಪಾಲ್ ಅವರು ನಮ್ಮ ದೇಶಕ್ಕೆ ಬಹುಮುಖವಾದ, ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ. ಅವರು ಸ್ವದೇಶಿ ಚಳುವಳಿಯ ಮೂಲಕ ಭಾರತೀಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ, ಶಿವಾ ವಿದ್ಯಾ ಮಂದಿರ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಬಿಪಿನ್ ಚಂದ್ರಪಾಲ್‍ರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಲಾಲ್-ಬಾಲ್-ಪಾಲ್ ಎಂಬ ತ್ರಿವಳಿ ಹೆಸರುಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖವಾಗಿವೆ. ಮಹರ್ಷಿ ಅರವಿಂದೋ ಅವರ ಜೊತೆಗೂಡಿ ಪಾಲ್ ಅವರು ಸ್ವದೇಶಿ ಚಳುವಳಿಯ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ.ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು, ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಕಸಾಪ ಉತ್ತರ ವಲಯ ಕಾರ್ಯದರ್ಶಿ ನಾಗೇಶ ತಿಮಾಜಿ ಬೆಳಮಗಿ, ಭೂಸನುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗೇಂದ್ರಪ್ಪ ಕಲಶೆಟ್ಟಿ, ಯುವ ಪ್ರತಿಭಾವಂತ ಶಂಭುಲಿಂಗ ಕೆಳಗಿನಮನಿ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.