ಭಾರತೀಯರು ಮಣ್ಣನ್ನು ಪೂಜಿಸುತ್ತಾರೆ : ಡಾ.ಎಸ್.ಎ.ಪಾಟೀಲ

ಕಲಬುರಗಿ,ಆ.24: ನಮ್ಮ ದೇಶದ ಜನರು ಮಣ್ಣಿನ ಜತೆ ಗಾಢ ಸಂಬಂಧವನ್ನು ಹೊಂದಿದ್ದು ಅದನ್ನು ಪೂಜಿಸಿ, ಗೌರವಿಸುತ್ತಾರೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಎಸ್.ಎ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರವಾಣಿ 90.8 ಸಮುದಾಯ ರೇಡಿಯೋ ಮತ್ತು ಗೋದುತಾಯಿ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ಮೇರಿ ಮಾಟಿ ಮೇರಾ ದೇಶ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ‘ಹೇ ಮಿಟ್ಟಿ ಕಾ ನಮನ್, ವೀರೋಂಕೋ ವಂದನ್’ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಈ ಕಾರ್ಯಕ್ರಮವು ಕೇಂದ್ರ ಸರ್ಕಾರ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಪೂಜ್ಯ ದೊಡ್ಡಪ್ಪ ಅಪ್ಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ನಮ್ಮ ದೇಶದ ಮಣ್ಣು ಬಹಳ ಉತ್ಕøಷ್ಟವಾಗಿದೆ ಎಂದು ಹೇಳುತ್ತಿದ್ದರು. ಈ ದೇಶದ ಮಣ್ಣಿನಲ್ಲಿ ಜೀವಕಳೆ ತುಂಬಿದೆ. ಇಂತಹ ಪ್ರಕೃತಿ ನೀಡಿದ ಕೊಡುಗೆಗೆ ನಾವೆಲ್ಲರೂ ಪೂಜಿಸಬೇಕು, ಗೌರವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಾತನಾಡಿ, ಹುತಾತ್ಮರಾದ ವೀರ ಪುರುಷ ಮತ್ತು ಮಹಿಳೆಯರನ್ನು ಗೌರವಿಸುವ ಈ ಅಭಿಯಾನವಾಗಿದೆ. ಮಣ್ಣಿಗೆ ಪೂಜನೀಯ ಸ್ಥಾನವಿದ್ದು, ಪ್ರಕೃತಿಯ ಕೊಡುಗೆ ಆದ ಮಣ್ಣು ನಮಗೆ ಬೇಕಾದನ್ನು ಕೊಡುತ್ತದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕರಾದ ಡಾ. ನೀಲಾಂಬಿಕಾ ಶೇರಿಕಾರ ಮಾತನಾಡಿ, ಇಂತಹ ಕಾರ್ಯಕ್ರಮವು ಕೇಂದ್ರ ಸರ್ಕಾರ ಆಯೋಜಿಸುತ್ತಿವುದು ಇತಿಹಾಸದ ಪುಟಗಳಲ್ಲಿ ಸೇರುವುದಾಗಿದೆ. ನಿಷ್ಕಲ್ಮಷವಾದ ಮಣ್ಣು ಕಾಮಧೇನು ಕಲ್ಪವೃಕ್ಷವಾಗಿದೆ. ಮನುಷ್ಯ ಜನ್ಮದಿಂದ ಸಾಯುವರೆಗೂ ಮಣ್ಣು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ ಮಾತನಾಡಿ, ಮಣ್ಣಿನ ಮಹತ್ವದ ಅರಿವು, ಸಂರಕ್ಷಣೆ ಬಗ್ಗೆ ಹೆಚ್ಚು ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ. ಅಮೃತ ಮಹೋತ್ಸವದ ಜತೆಗೆ 76ನೇ ಸ್ವಾತಂತ್ರ್ಯೋತವದ ಅಂಗವಾಗಿ ಕೇಂದ್ರ ಸರಕಾರ ಈ ಅಭಿಯಾನವನ್ನು ಆರಂಭಿಸಿದೆ. ದೇಶಾದ್ಯಂತ ‘ಅಮೃತ ಕಲಶ ಯಾತ್ರೆ’ ಗೆ ಸಾಕ್ಷಿಯಾಗಲಿದೆ. ಇದು ಭಾರತದ ಮೂಲೆ ಮೂಲೆಯಿಂದ ದೆಹಲಿಗೆ 7500 ಕಲಶಗಳಲ್ಲಿ ಮಣ್ಣನ್ನು ಸಾಗಿಸುವ ಕಾರ್ಯಕ್ರಮವನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಅಂತರವಾಣಿ ನಿರ್ದೇಶಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಡಾ.ಪುಟ್ಟಮಣಿ ದೇವಿದಾಸ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ದಾಕ್ಷಾಯಣಿ ಕಾಡಾದಿ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮತ್ತು ಪ್ರಾಧ್ಯಾಪಕರು ಪ್ರಾರ್ಥಿಸಿದರು. ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.