ಭಾರತೀಯರಿಗೆ ಸಿಹಿಸುದ್ದಿ ನೀಡಿದ ಅಮೆರಿಕಾ

ಫ್ರಾಂಕ್‌ಫರ್ಟ್ (ಜರ್ಮನಿ), ಸೆ.೧೬- ಅಮೆರಿಕಾದ ಬಿ೧ (ವ್ಯಾಪಾರ) ಹಾಗೂ ಬಿ೨ (ಪ್ರವಾಸಿ) ವೀಸಾಗಳನ್ನು ಪಡೆದುಕೊಳ್ಳುವುದು ಎಷ್ಟೊಂದು ಕಠಿಣ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಫ್ರಾಂಕ್‌ಫರ್ಟ್‌ನಲ್ಲಿರುವ ಅಮೆರಿಕಾ ರಾಯಬಾರಿ ಕಚೇರಿಯಿಂದ ವಿಶೇಷವಾಗಿ ಭಾರತೀಯರಿಗೆ ಸಿಹಿಸುದ್ದಿ ನೀಡಲಾಗಿದೆ. ಫ್ರಾಂಕ್‌ಫರ್ಟ್‌ನಲ್ಲಿರುವ ಅಮೆರಿಕಾ ದೂತಾವಾಸ ಕಚೇರಿಯು ನಿರ್ದಿಷ್ಟವಾಗಿ ಭಾರತೀಯ ಅರ್ಜಿದಾರರಿಗಾಗಿ ವಲಸಿಗೇತರ ವೀಸಾ ಸಂದರ್ಶನ ನೇಮಕಾತಿಗಳ ಸಮಯ ಮೀಸಲಿಟ್ಟಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರಿಂದ ವೀಸಾಗಾಗಿ ಕಾಯುವ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿತವಾಗಲಿದೆ.
ಭಾರತ ಹಲವು ರಾಜ್ಯಗಳಲ್ಲೂ ಅಮೆರಿಕಾ ವಿಸಾ ಪಡೆಯುವ ಸಮಯದ ಅವಧಿಯಲ್ಲೂ ಕೂಡ ಹೆಚ್ಚಿನ ವ್ಯತ್ಯಾಸವಿರುತ್ತದೆ. ಕೊಲ್ಕತ್ತಾದಲ್ಲಿ ಕಾಯುವ ಸಮಯ ೬೦೭ ದಿನಗಳಾಗಿದ್ದರೆ ಮುಂಬೈನಲ್ಲಿ ೫೭೧, ಚೆನ್ನೈನಲ್ಲಿ ೪೮೬ ಹಾಗೂ ಹೈದರಾಬಾದ್‌ನಲ್ಲಿ ಎಲ್ಲಕ್ಕಿಂತ ಕಡಿಮೆ ಅವಧಿ ಅಂದರೆ ಕೇವಲ ೪೪೧ ದಿನಗಳಾಗಿವೆ. ಆದರೆ ಇನ್ನು ಮುಂದೆ ಫ್ರಾಂಕ್‌ಫರ್ಟ್‌ನಿಂದ ಮನವಿ ಸಲ್ಲಿಸಿದರೆ ಸಂದರ್ಶನ ನೇಮಕಾತಿಗಾಗಿ ಕಾಯುವ ಸಮಯವು ಕೇವಲ ಮೂರು ದಿನಗಳಾಗಲಿದೆ. ಹಾಗಾಗಿ ಯುರೋಪ್ ರಾಷ್ಟ್ರಗಳಲ್ಲಿ ನೆಲೆಸಿರುವ ಹಲವು ಭಾರತೀಯರಿಗೆ ಇದರಿಂದ ಹೆಚ್ಚಿನ ಪ್ರಯೋಜನ ತರಲಿದೆ ಎನ್ನಲಾಗಿದೆ. ಭಾರತದಲ್ಲಿ ವಿಸಾಗಾಗಿ ನೇಮಕಾತಿ ಸಂದರ್ಶನ ಅವಧಿ ಹೆಚ್ಚಿನ ಸಮಯ ತಗಲುವ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಅಮೆರಿಕಾ ಕಾನ್ಸುಲೇಟ್‌ನಿಂದಲೂ ಮನವಿ ಸಲ್ಲಿಸಲು ಅಮೆರಿಕಾ ಕಳೆದ ವರ್ಷದಿಂದ ಅವಕಾಶ ಕಲ್ಪಿಸಿದೆ. ಆದರೆ ವಲಸೆಯೇತರ ವೀಸಾ ಸಂದರ್ಶನದ ನೇಮಕಾತಿಗಳನ್ನು ನಿಗದಿಪಡಿಸಲು ಹೊಸ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಭಾರತೀಯರಿಗೆ ಸಮಸ್ಯೆ ಎದುರಾಗಿದೆ. ಪೋರ್ಟಲ್‌ನ ಸರ್ವರ್‌ನಲ್ಲಿ ಸಮಸ್ಯೆ ಕಂಡುಬರುತ್ತಿರುವುದು ಅರ್ಜಿದಾರರಿಗೆ ತಲೆನೋವು ಉಂಟು ಮಾಡಿದೆ. ಆದರೆ ಈ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಭಾರತದಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿಗಳು ಪ್ರಸಕ್ತ ಹಣಕಾಸಿನ ವರ್ಷ ಆರಂಭದಿಂದ ಸುಮಾರು ೩.೩ ಲಕ್ಷ ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ಭಾರತೀಯರಿಗೆ ನೀಡಿದೆ. ಇದು ೨೦೧೯ರ ಅವಧಿಯಲ್ಲಿ ನೀಡಿದಕ್ಕಿಂತ ೭೧ ಪ್ರತಿಶತ ಹೆಚ್ಚಾಗಿದೆ ಎನ್ನಲಾಗಿದೆ.