ಭಾರತಾಂಬೆಯ ಮಡಿಲಿಲ್ಲಿರುವ ನಾವೆಲ್ಲರು ಒಂದೇ: ನಾರಾಯಣ ಪ್ರಸಾದ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.11:- ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾದಲ್ಲಿ ನಿರ್ಮಾಣ ಮಾಡುತ್ತಿರುವ ಉದ್ಯಾನವನಕ್ಕಾಗಿ ಪ್ರತಿ ಗ್ರಾಮಗಳಲ್ಲೂ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ರವಾನೆ ಮಾಡುವ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ದಲ್ಲಿರುವ ರಣದಲ್ಲಿನ ಅರಳೀವೃಕ್ಷದ ಬಳಿ ಮಡಿಕೆ ಇಟ್ಟು ಪೂಜೆ ಸಲ್ಲಿಸಿ ಪಕ್ಷದ ಮಾಜಿ ಶಾಸಕರು, ನಾನಾಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಮಡಿಕೆಗೆ ಮಣ್ಣು ತುಂಬಿಸಿ ಭಾರತ್ ಮಾತಾಕೀ ಜೈ ಎಂದು ಘೊಷಣೆ ಕೂಗಿ. ಪ್ರತಿ ಮನೆ ಮನೆಗಳಿಗೆ ತೆರಳಿ ಮಣ್ಣು ಸಂಗ್ರಹಿಸುವ ಕಾರ್ಯಕ್ಕೆ ಮುಂದಾದರು.
ಅಭಿಯಾನದ ನೇತೃತ್ವ ವಹಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣಪ್ರಸಾದ್ ಮಾತನಾಡಿ, ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಚಾಲನೆ ದೊರೆತಿದೆ. ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಎಂಬ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ಈ ಮಣ್ಣನ್ನು ಸಂಗ್ರಹ ಮಾಡಲಾಗುತ್ತಿದೆ. ಪ್ರತಿಗ್ರಾಮಗಳಲ್ಲೂ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ರವಾನೆ ಮಾಡಲಾಗುತ್ತದೆ ಎಂದರು.
ನಾವೆಲ್ಲ ಒಂದೇ ಎಂಬ ಐಕ್ಯತಾ ಭಾವನೆ ಮೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವುದು ನನ್ನ ಮಣ್ಣು ನನ್ನ ದೇಶ ಅಭಿಯಾನದ ಉದ್ದೇಶವಾಗಿದೆ ಎಂದರು.
ಬಳಿಕ ರಥದ ಬೀದಿಯಲ್ಲಿರುವ ಸಾಂಕೇತಿಕವಾಗಿ ಗಣೇಶ್ ದೀಕ್ಷೀತ್, ಸುಂದರ್ ಸೇರಿದಂತೆ ಅನೇಕ ಮನೆಗಳಿಗೆ ತೆರಳಿ ಮಣ್ಣು ಸಂಗ್ರಹಿಸಲಾಯಿತು. ಈ ಅಭಿಯಾನ ಪ್ರತಿ ಮಂಡಲ, ಮಹಾಶಕ್ತಿ, ಶಕ್ತಿ ಕೇಂದ್ರ, ಬೂತ್ ಮಟ್ಟದಲ್ಲಿ ಮಣ್ಣು ಸಂಗ್ರಹ ಮಾಡಿ, ದೆಹಲಿಗೆ ಕಳುಹಿಸಿ ಕೊಡಲಾಗುತ್ತದೆ ಎಂದರು.
ಅಭಿಯಾನದಲ್ಲಿ ಮಾಜಿ ಶಾಸಕ ಎನ್.ಮಹೇಶ್, ಬಿಜೆಪಿ ಮಾಜಿ ಅಧ್ಯಕ್ಷ ಆರ್.ಸುಂದರ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ನಗರ ಘಟಕದ ಅಧ್ಯಕ್ಷ ರಾಜು, ಮುಖಂಡರಾದ ಹನುಮಂತಶೆಟ್ಟಿ, ಶಿವಣ್ಣ, ರಂಗಸ್ವಾಮಿ, ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪ್ಮರ ಶಿವಕುಮಾರ್, ಓಬಿಸಿ ಜಿಲ್ಲಾ ಮೋರ್ಚಾ ಅಧ್ಯಕ್ಷ ನಟರಾಜೇಗೌಡ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಾಮಾಜಿಕ ಜಾಲತಾಣ ವಿಭಾಗದ ಮಹದೇವಸ್ವಾಮಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಯುವಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕಮಲಮ್ಮ, ಸುಕೇಶಿನಿ, ವನಜಾಕ್ಷಿ, ಮಹದೇವಮ್ಮ, ವೇಣುಗೋಪಾಲ್, ನಗರಸಭಾ ಸದಸ್ಯೆ ಮಮತಾ ಬಾಲಸುಬ್ರಮಣ್ಯ, ಮಾಜಿ ಸದಸ್ಯ ಬಸವರಾಜು, ಕೇಬಲ್ ಪಿ.ರಂಗಸ್ವಾಮಿ ಮೊದಲಾದವರು ಇದ್ದರು.