ಭಾರತವು ಯಾವುದೇ ಒಂದು ಭಾಷೆ, ಧರ್ಮ, ಸಂಸ್ಕøತಿ, ಆಡಳಿತಕ್ಕೆ ಸೇರಿದ್ದಲ್ಲ: ನಿತೀಶ್ ನಾರಾಯಣ್

ಕಲಬುರಗಿ:ಡಿ.02: ದೇಶದಲ್ಲಿ ಯಾವುದೇ ಒಂದು ಭಾಷೆ, ಧರ್ಮ, ಸಂಸ್ಕøತಿ, ಒಂದು ಆಡಳಿತಕ್ಕೆ ಸೇರಿದ್ದಲ್ಲ ಎಂದು ಎಸ್‍ಎಫ್‍ಐ ದೆಹಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಿತೀಶ್ ನಾರಾಯಣ್ ಅವರು ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ ಎಸ್‍ಎಫ್‍ಐ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ದೇಶದಲ್ಲಿ ಹಲವಾರು ಭಾಷೆಗಳಿವೆ, ಜನಾಂಗಗಳಿವೆ, ಧರ್ಮಗಳಿವೆ, ಹಲವಾರು ಬುಡಕಟ್ಟುಗಳಿವೆ ಎಂದರು.
ಆ ಕಡೆ ಮಣಿಪುರ, ಈ ಕಡೆ ಕರ್ನಾಟಕ ಮತ್ತು ನಾಗಾಲ್ಯಾಂಡ್ ಪಕ್ಕದಲ್ಲಿ ಆಂಧ್ರಪ್ರದೇಶವಿದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನೆಲವಾಗಿದೆ. ನಾವೆಲ್ಲರೂ ಈ ದೇಶಕ್ಕೆ, ಈ ನೆಲಕ್ಕೆ ಸೇರಿದವರು. ದೇಶ ದುಡಿಯುವಂತಹ ವರ್ಗಕ್ಕೆ ಸೇರಿದೆ ಎಂದು ಅವರು ಹೇಳಿದರು.
ಎಸ್‍ಎಫ್‍ಐ ಸಂಘಟನೆಯು ಈ ನೆಲದ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ಆ ಕಾರಣಕ್ಕಾಗಿ ನಾವುಗಳು ನಮ್ಮ ಜೀವನವನ್ನು ಸಂಘಟನೆಗೆ ಸಮರ್ಪಿಸಿಕೊಂಡಿದ್ದೇವೆ. ಎಸ್‍ಎಫ್‍ಐ ಅಂದರೆ ವಿದ್ಯಾರ್ಥಿಗಳ ಹಿತಕ್ಕಾಗಿ ಅರ್ಪಿಸಿಕೊಂಡ ಸಂಘಟನೆ ಎಂದು ಅವರು ತಿಳಿಸಿದರು.
ಸಂಘಟನೆಯ ಸಹ ಕಾರ್ಯದರ್ಶಿ ದಿಪ್ಸಿತಾ ಧರ್ ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಕ್ಕಳು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರು ಯಾವ ಉಡುಪು ಉಡಬೇಕು, ಯಾವ ಆಹಾರ ತಿನ್ನಬೇಕು, ಸಂಗಾತಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಆಳುವ ಸರ್ಕಾರ ನಿರ್ಧರಿಸುತ್ತಿದೆ. ಅದನ್ನೆಲ್ಲ ನಿರ್ಧರಿಸುವುದಕ್ಕೆ ಅವರು ಯಾರು? ಎಂದು ಪ್ರಶ್ನಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ್ ಅವರು ಮಾತನಾಡಿ, ಎಸ್‍ಎಫ್‍ಐ ಅಂದರೆ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟುವುದಾಗಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸುವ ಸಂಘಟನೆ. ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸುವ ಸಂಘಟನೆಯಾಗಿದೆ. ನಾನೂ ಕೂಡ ಎಸ್‍ಎಫ್‍ಐ ಸಂಘಟನೆಯ ಮೂಲಕವೇ ಹೋರಾಟಕ್ಕೆ ಬಂದಿರುವೆ ಎಂದರು.
ಹಿರಿಯ ಸಾಹಿತಿ ಡಾ. ಮೀನಾಕ್ಷಿ ಬಾಳಿ, ಭೀಮನಗೌಡ ಸುಂಕೇಶ್ವರಹಾಳ್, ಅಮರೇಶ್ ಕಡಗದ್, ಡಾ. ಶರಣಪ್ಪ ಸೈದಾಪೂರ್, ಡಾ. ಸಂತೋಷ್ ಹುಂಪ್ಳಿ, ಬೃಂದಾ ಧನ್ನಿ, ಮಾಲಾಶ್ರೀ ಮತ್ತಿಮೂಡ್ ಮುಂತಾದವರು ಉಪಸ್ಥಿತರಿದ್ದರು. ಸುಜಾತಾ ಅವರು ಕಾರ್ಯಕ್ರಮ ನಿರೂಪಿಸಿದರು. ಮೇಘಾ ಅವರು ಸ್ವಾಗತಿಸಿದರು. ಸುಕನ್ಯಾ ಅವರು ವಂದಿಸಿದರು. ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶಕ್ಕಾಗಿ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು.