ಭಾರತವನ್ನು ಅರ್ಥಮಾಡಿಕೊಳ್ಳಲು ವಿವೇಕಾನಂದರ ತಿಳಿದುಕೊಳ್ಳಿ : ಯೋಗೇಶ ಎಂ.ಬಿ

ಬೀದರ:ಜ.20: ಸ್ವಾಮಿ ವಿವೇಕಾನಂದರ ಕುರಿತು ಬರೀ ಭಾಷಣ ಮಾಡಿದರೆ ಸಾಲದು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾದ ಯೋಗೇಶ ಎಂ.ಬಿ. ತಿಳಿಸಿದರು.
ನೆಹರೂ ಯುವ ಕೇಂದ್ರ ಬೀದರ, ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ ಕಾಳಸರತೂಗಾಂವ, ಭಾರತ ಯೂತ್ ವೆಲ್‍ಫೇರ್ ಎಜುಕೇಶನ್ ಮತ್ತು ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ ಬೀದರ ಹಾಗೂ ಸ್ವಾತಕೋತ್ತರ ಕೇಂದ್ರ ಹಾಲಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ 161ನೇ ಜಯಂತಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ-2023ರ ಪ್ರಯುಕ್ತ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡ ಸಾಮಾಜಿಕ ಸೇವಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿವೇಕಾನಂದರು ಹುಟ್ಟಿದಾಗ ಮಾತ್ರ ಭಾರತ ದೇಶ ಹುಟ್ಟಿತ್ತು. ಅವರ ಜೀವನ ಮತ್ತು ಸಾಧನೆಯ ಅಧ್ಯಯನದಿಂದ ವಿವೇಕಾನಂದರ ಜೀವನ ಅರ್ಥವಾಗುತ್ತದೆ. ಒಂದು ದೇಶದ ಪ್ರಗತಿ ಆ ದೇಶದ ಶೈಕ್ಷಣಿಕ ಮಟ್ಟದ ಮೇಲೆ ನಿಂತಿದೆ. ಶಿಕ್ಷಕ ಈ ದೇಶದ ನಿಜವಾದ ಶಿಲ್ಪಿ. ಶಿಕ್ಷಕನನ್ನು ಗುರು, ಆಚಾರ್ಯ, ಉಪಾಧ್ಯಾಯ ಮತ್ತು ಋಷಿ ಎಂತಲೂ ಕರೆಯುತ್ತಾರೆ. ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ 8 ಸಂಪುಟಗಳನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಹೋಗಿ ಅಲ್ಲಿಯ ಗ್ರಂಥಾಲಯದಲ್ಲಿ ಅಧ್ಯಯನ ಮಾಡಬೇಕೆಂದು ಯೋಗೇಶ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಶಿವಕುಮಾರ ಉಪ್ಪೆ ಮಾತನಾಡಿ “ಒಂದು ದೇಶದ ಏಳ್ಗೆ ಆ ದೇಶದ ಯುವಕರ ಮೇಲಿದೆ. ಯುವಕರನ್ನು ಹಾಳು ಮಾಡಿದರೆ ದೇಶ ಹಾಳಾದಂತೆಯೇ ಸರಿ. ಹಾಗಾಗಿಯೇ ಸ್ವಾಮಿ ವಿವೇಕಾನಂದರು ಯುವಕರನ್ನು ಜಾಗೃತರಾಗಿರುವಂತೆ ತಿಳಿಸಿದ್ದರು. ಯುವಕರು ದುರ್ಗುಣ ದುಶ್ಚಟಗಳಿಗೆ ಬಲಿಯಾಗದೆ ಭವ್ಯ ಭಾರತದ ಇತಿಹಾಸ ಮತ್ತು ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಭಾರತ ಸರ್ಕಾರದ ರಾಷ್ಟ್ರೀಯ ಜೂನಿಯರ್ ಫೆಲೋಶಿಪ್ ಪ್ರಶಸ್ತಿ ಪುರಸ್ಕøತರಾದ ಮಹಾರುದ್ರ ಡಾಕುಳಗೆ ಮಾತನಾಡಿ “ವಿವೇಕಾನಂದರು ಏಳು ಎದ್ದೇಳು ಎಂದು ಹೇಳಿದ್ದರು. ಯುವಕರು ಕೇವಲ ಶಾರೀರಿಕವಾಗಿ ಎದ್ದೇಳದೆ ಮಾನಸಿಕವಾಗಿ ಎದ್ದು ಜಾಗೃತರಾಗಬೇಕು. ಒಂದು ದುರ್ದೈವದ ಸಂಗತಿ ಏನೆಂದರೆ ಅಂದು ಜನಿಸಿದ ವಿವೇಕಾನಂದರನ್ನು ಇಂದಿಗೂ ನಾವು ಸ್ಮರಣೆ ಮಾಡುತ್ತಿದ್ದೆವೆಯೇ ಹೊರತು ಇಂದಿಗೂ ಒಬ್ಬನೇ ಒಬ್ಬ ವಿವೇಕಾನಂದ ಈ ಭಾರತದಲ್ಲಿ ಜನಿಸದೇ ಇರುವುದು ಈ ದೇಶದ ಬಹುದೊಡ್ಡ ದುರಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿಗಳಾದ ರವೀಂದ್ರ ಗಬಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಸಂಜೆ ವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಮಚಂದ್ರ ಗಣಾಪುರ ಸ್ವಾಗತಿಸಿದರು. ಶಿವಕುಮಾರ ಸಂಗನ್ ನಿರೂಪಿಸಿದರು. ಸಂದೀಪ್ ರಾಜ್ ವಂದಿಸಿದರು. ವೇದಿಕೆ ಮೇಲೆ ಪತ್ರಕರ್ತರಾದ ಸಂತೋಷ ಚೆಟ್ಟಿ, ವೀರಶೈವ ಮಹಾಸಭೆ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಕಾರ್ತಿಕ ಸ್ವಾಮಿ ಮಠಪತಿ, ಉಪಸ್ಥಿತರಿದ್ದರು. ಕೊನೆಯಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ವಿಶೇಷ ಶ್ರಮದಾನ ಜರುಗಿತು.