ಭಾರತದ 30 ಭಾಷೆಗಳಲ್ಲಿ ವಚನ ಸಂಪುಟ ಮುದ್ರಣ: ಸಿದ್ದಣ್ಣ ಲಂಗೋಟಿ

ಅಥಣಿ : ಜ.8: 12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ನಮ್ಮೆಲ್ಲರಿಗೆ ದಾರಿ ದೀಪವಾಗಿವೆ. ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯವನ್ನು ಈಗಾಗಲೇ ದೇಶದ 23 ರಾಜ್ಯಗಳ ಮಾತೃಭಾಷೆಯಲ್ಲಿ ಮುದ್ರಣ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನುಳಿದ 7 ರಾಜ್ಯಗಳ ಭಾಷೆಯಲ್ಲಿ ಪ್ರಕಟಿಸುವ ಮೂಲಕ ದೇಶದ 30 ಭಾಷೆಗಳಲ್ಲಿ ವಚನ ಸಂಪುಟ ಮುದ್ರಣ ಕಾರ್ಯ ನಡೆಯಲಿದೆ ಎಂದು ಅಂತರಾಷ್ಟ್ರೀಯ ಬಸವ ತತ್ವ ಪ್ರಚಾರಕ ಪೆÇ್ರೀ. ಸಿದ್ದಣ್ಣ ಲಂಗೋಟಿ ಹೇಳಿದರು.
ಅವರು ಇಲ್ಲಿನ ಮೋಟಗಿ ಮಠದಲ್ಲಿ ಆಯೋಜಿಸಲಾಗಿದ್ದ ಶರಣ ಸಂಸ್ಕೃತಿ ಮೇಳವನ್ನು ಬಸವಣ್ಣನವರ ವಚನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಚನ ಪಿತಾಮಹ ಎಂದು ಕರೆಯಲ್ಪಡುವ ಫ. ಗು. ಹಳ್ಳಿಕಟ್ಟಿಯವರು 1923ರಲ್ಲಿ ಪ್ರಥಮ ವಚನ ಸಂಪುಟವನ್ನು ಹೊರ ತಂದರು. ಬಸವಾದಿ ಶರಣರು ನೀಡಿದ ವಚನಗಳು ಶತಮಾನ ಕಂಡರೂ ಇಂದಿಗೂ ನಮ್ಮ ನಿಮ್ಮೆಲ್ಲರಿಗೆ ದಾರಿ ದೀಪವಾಗಿವೆ. ಇಂತಹ ಕನ್ನಡ ಭಾಷೆಯ ವಚನ ಸಾಹಿತ್ಯ ಇನ್ನಿತರ ಭಾಷೆಗಳಿಗೆ ಅನುವಾದಿಸಿ ದೇಶದ ಎಲ್ಲಾ ಜನರಿಗೂ ಶರಣರ ಸಂದೇಶಗಳು ತಲುಪಬೇಕು ಎಂಬ ಉದ್ದೇಶದಿಂದ ದೇಶದ ಎಲ್ಲ ಭಾಷೆಗಳಲ್ಲಿ ವಚನ ಸಂಪುಟವನ್ನು ಮುದ್ರಿಸುವ ಕಾರ್ಯವನ್ನ ಮಾಡಲಾಗುತ್ತಿದೆ. ಇದು ನನ್ನ ಬದುಕಿನ ಜೀವಾಳದ ಜೊತೆಗೆ ಕನ್ನಡ ನಾಡಿನ ಅನೇಕ ಮಠಮಾನ್ಯಗಳು ನುಡಿಸುತ್ತಿರುವ ಶರಣ ಸಂಸ್ಕೃತಿಯ ಮೇಳಗಳ ಆಶಯವೂ ಕೂಡ ಆಗಿದೆ. ಭಾರತೀಯ ಸಂಸ್ಕೃತಿಯನ್ನು ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಅನೇಕ ದೇಶಗಳು ಇಂದು ಅನುಸರಿಸುತ್ತಿರುವ ದಿನಮಾನಗಳಲ್ಲಿ ವಿಶ್ವಗುರು ಬಸವಣ್ಣನವರ ವಚನಗಳನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸುವ ಮೂಲಕ ವಿದೇಶಗಳಲ್ಲಿಯೂ ವಚನ ಸಂಪುಟವನ್ನು ಪ್ರಸಾರ ಮಾಡಲಾಗುವುದು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಬಡವ ಶ್ರೀಮಂತ, ಕೆಳ ಜಾತಿ, ಮೇಲಿನ ಜಾತಿ, ಅವನು ಶ್ರೇಷ್ಠ ಇವನು ಕನಿಷ್ಠ ಎಂಬ ಭೇದ ಭಾವ ಮಾಡಬಾರದು. ಅಂತರ್ಜಾತಿ ಮತ್ತು ಒಳಪಂಗಡಗಳಲ್ಲಿ ವಿವಾಹಗಳು ನಡೆಯಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಅದಕ್ಕಾಗಿ ಅವರು ಅಂತರ್ಜಾತಿ ವಿವಾಹವನ್ನು ಮಾಡುವ ಮೂಲಕ ಕಲ್ಯಾಣದಲ್ಲಿ ಅಂದು ಕ್ರಾಂತಿಯನ್ನು ಮಾಡಿದರು. ಬಸವಣ್ಣನವರು ತೋರಿಸಿದ ದಾರಿಯಲ್ಲಿ ನಡೆದಾಗ ಬದುಕು ಸುಂದರ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ ಎಲ್ ಪಾಟೀಲ್ ಮಾತನಾಡಿ ಮೋಟಗಿ ಮಠದಲ್ಲಿ ಶರಣ ಸಂಸ್ಕೃತಿ ಮೇಳದ ಮೂಲಕ ಗಡಿನಾಡಿನಲ್ಲಿ ಕನ್ನಡಿಗರ ಮತ್ತು ಮರಾಠಿಗರ ಬಾಂಧವ್ಯ ಸಾಮರಸ್ಯದಿಂದ ನಡೆಯಲಿ ಎಂಬ ಉದ್ದೇಶದಿಂದ ಗಡಿ ಭಾಷಾ ಭಾವೈಕ್ಯತೆಯ ನುಡಿ ಹಬ್ಬ ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ಶ್ರೀ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರು ಕೊರೋನಾ ಸಂದರ್ಭದಲ್ಲಿ ಮಹಾತ್ಮರ ಚರಿತಾಮೃತ ಮಹಾಗ್ರಂಥವನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಗಡಿ ಭಾಗದಲ್ಲಿ ಧರ್ಮ ಮತ್ತು ಭಾಷಾ ಭಾವೈಕ್ಯತೆಯನ್ನ ಬೆಳೆಸುವ ನಿಟ್ಟಿನಲ್ಲಿ ಕಾರ್ಯವನ್ನ ಮಾಡುತ್ತಿದ್ದಾರೆ ಎಂದು ಹೇಳಿದ ಅವರು 75 ವರ್ಷ ತುಂಬಿದ ನಮ್ಮಂತ ಹಿರಿಯರಿಗೆ ಅಮೃತ ಮಹೋತ್ಸವ ಸವಿ ನೆನಪಿನಲ್ಲಿ ಗೌರವಿಸುತ್ತಿರುವುದಕ್ಕೆ ಕೃತಜ್ಞತೆ ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೋಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ ಸರ್ವರನ್ನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಮುರಿಗೆಪ್ಪ ಚುರುಮುರಿ, ಮಹದೇವ ಧರಿಗೌಡರ, ಮಹಾದೇವ ಹೊನ್ನಳ್ಳಿ, ಶೇಖರ ಮಗದುಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮುರುಗೇಶ ಬಾನಿ ಕಾರ್ಯಕ್ರಮ ನಿರುಪಿಸಿದರು. ವಿಜಯಗೌಡ ನೇಮಗೌಡ ವಂದಿಸಿದರು.