ಭಾರತದ ಸಹಕಾರಿ ರಂಗ ಸಾಮಾಜಿಕ ನ್ಯಾಯ ನೀಡುವಲ್ಲಿ ಉತ್ತಮ ಮಾದರಿ

ಬೀದರ:ಸೆ.7:ಭಾರತದ ಸಹಕಾರಿ ರಂಗವು ಸಾಮಾಜಿಕ ನ್ಯಾಯ ನೀಡುವಲ್ಲಿ ಉತ್ತಮ ಮಾದರಿಯಾಗಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಆಂದೋಲನವಾಗಿದ್ದು ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ. ಕೃಷಿ ಮಾತ್ರವಲ್ಲ ಇತರ ಕ್ಷೇತ್ರಗಳಲ್ಲೂ ಸಹಕಾರಿ ರಂಗದ ಸಾಧನೆಗಳು ಉನ್ನತವಾಗಿವೆ. ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುವವರಲ್ಲಿ ಉತ್ತಮ ಆಡಳಿತದ ಅನುಭವ ಕೂಡಾ ಸಮೃದ್ದವಾಗಿರುತ್ತದೆ. ಸಹಕಾರಿ ರಂಗದ ಅನುಭವ ನಾಯಕತ್ವ ಗುಣಗಳನ್ನು ಕಲಿಸುತ್ತದೆ. ಸಹಕಾರಿ ಸಂಘಗಳಲ್ಲಿ ುತ್ತಮ ಆಡಳಿತ ನಡೆಸಬೇಕಾದರೆ ಆಡಳಿತ ಮಂಡಳಿ ಸದಸ್ಯರಿಗೆ ಸಹಕಾರಿ ಕಾಯ್ದೆ ಮತ್ತು ಕಾನೂನು ಮಾಹಿತಿಗಳು ಇರಬೇಕಾಗುತ್ತದೆ. ಸಹಕಾರಿ ಸಂಘವು ಒಮದು ಕುಟುಂಬದಂತೆ ಇದ್ದು ಸದಸ್ಯರು ಹೊಂದಿಕೊಂಡು ಬದುಕಿದಾಗ ಕುಟುಂಬದಲ್ಲಿ ಸಂತೋಷ, ಅಭಿವೃದ್ದಿ ಇರುವಂತೆ ಸಹಕಾರಿ ಆಡಳಿತ ಮಂಡಳಿಯಲ್ಲೂ ಕೌಟುಂಬಿಕ ಭಾವನೆ ಮೂಡಿದಾಗ ಸಂಸ್ಥೆಗಳು ಅಭಿವೃದ್ದಿ ಹೊಂದಲು ಸಾಧ್ಯ. ಕುಟುಂಬದ ಅಭಿವೃದ್ದಿಗಾಗಿ ಯಜಮಾನ ಶ್ರಮಿಸುವಂತೆ ಸಂಘದ ನಿರ್ದೇಶಕರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಸಂಘವೂ ಬೆಳವಣಿಗೆ ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಶ್ರಮಿಸಬೇಕು ಎಂದು ಬೀದರ ಜಿಲ್ಲಾ ಕೇಂದ್ರ ಬ್ಯಾಂಕ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಹಾಜನ ಅವರು ನುಡಿದರು.

ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ಯಾಕ್ಸಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ನಬಾರ್ಡ ವತಿಯಿಂದ ನಡೆದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರವು ದೇಶದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು ಇನ್ನಷ್ಟು ಬಲಗೊಳ್ಳಬೇಕಾಗಿದೆ. ಸರಕಾರವು ಸರಿಯಾದ ಸಮಯಕ್ಕೆ ಘೋಷಿಸಿದ ಸಹಾಯಧನವನ್ನು ಸಂಸ್ಥೆಗಳಿಗೆ ನೀಡಿದಾಗ, ಸಂಸ್ಥೆಗಳು ಲಾಭ ಗಳಿಸಬಹುದಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಆರ್ಥಿಕ ಲೆಕ್ಕಾಚಾರಗಳು, ಆಡಿಟ್ ಮತ್ತು ಲೆಕ್ಕ ಪರಿಶೋಧನೆಗಳು ಕಡ್ಡಾಯವಾಗಿ ನಡೆಯಬೇಕು. ಲೆಕ್ಕ ಪರಿಶೋಧನೆ ವರದಿಗಳನ್ನು ಆಡಳಿತಮಂಡಳಿಗಳು ಚರ್ಚಿಸಿ ಸರಿಯಾಗಿ ಅರ್ಥೈಸಿಕೊಂಡು ಮುಂದುವರಿಯಬೇಕು. ಸಂಸ್ಥೆಗಳಲ್ಲಿ ಠೇವಣಿಗಳನ್ನು ಸಂಗ್ರಹಿಸಬೇಕು, ಅದನ್ನು ಸಾಲದ ವ್ಯವಹಾರದಲ್ಲಿ ಬಳಸಿಕೊಳ್ಳಬೇಕು, ಇದರಿಂದ ಸಂಸ್ಥೆ ಲಾಭಗಳಿಸಬಹುದು ಎಂದು ಹೇಳಿದರು.

ಶಿವಮೊಗ್ಗದ ಸಹಕಾರಿ ಸಂಘದ ಅಧ್ಯಕ್ಷ ನೀಲಪ್ಪನವರ ಅವರು ಸಮಾರಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ಭಾಗವತ ತರಬೇತಿಯ ಉದ್ದೇಶಗಳನ್ನು ವಿವರಿಸಿದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸ್ವಾಗತಿಸಿದರೆ, ಎಸ ಜಿ ಪಾಟೀಲ ವಂದಿಸಿದರು ಅನಿಲ ಪಿ ಕಾರ್ಯಕ್ರಮ ನಿರ್ವಹಿಸಿದರು. ಮಹಾಲಿಂಗ ಸಹಕರಿಸಿದರು.