ಭಾರತದ ಸಂಸ್ಕøತಿ ವಿಶ್ವಕ್ಕೆ ಸಾರಿದ ಜಗತ್ ಸನ್ಯಾಸಿ ವೀವೇಕಾನಂದರು : ರೇವಣಸಿದ್ದಪ್ಪ ಜಲಾದೆ

ಬೀದರ್: ಜ.17:ತನ್ನ ವಾಗ್ಝರಿ, ಸನ್ನಡತೆ, ದೇಶಭಕ್ತಿ ಹಾಗೂ ಉತ್ತಮ ಸಂದೇಶಗಳ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಜಗತ್ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಂಚಾಲಕ ರೇವಣಸಿದ್ದಪ್ಪ ಜಲಾದೆ ನುಡಿದರು.
ನೆಹರು ಯುವ ಕೇಂದ್ರ, ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ, ಸ್ವಾಮಿ ವಿವೇಕಾನಂದರ ಯುವ ಶಕ್ತಿ ಕೇಂದ್ರ ಕಾಳಸರತೂಗಾಂವ, ಭಾರತ ಯೂತ್ ವೆಲ್ಫೇರ್ ಎಜುಕೇಶನ್ ಮತ್ತು ರೂರಲ್ ಡೆವಲಪಮೆಂಟ್ ಸೊಸೈಟಿ ಹಾಗೂ ಓಂ ಸಿದ್ದಿವಿನಾಯಕ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ದಿವಿನಾಯಕ ಕಾಲೇಜಿನಲ್ಲೂ ನಡೆದ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ, ಯುವ ಶಾಂತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರ ಐಕಾನ್, ದೇಶದ ಸಾಂಸ್ಕೃತಿಕ ನಾಯಕನಾಗಿ ವಿವೇಕಾನಂದರು ಭಾರತದ ಹಲವಾರು ವಿಚಾರಧಾರೆಗಳನ್ನು ಅಮೇರಿಕಾದಲ್ಲಿ ಪ್ರಸ್ತುತಪಡಿಸಿದಾಗ ವಿಶ್ವವೇ ಬೆರಗಾಗಿ ನಿಂತಿತ್ತು. ಒಂದು ಕಾಲದಲ್ಲಿ ಹಲವರು ಭಾರತ ದೇಶವನ್ನು ಭಿಕ್ಷುಕರ ದೇಶ, ಸೋಮಾರಿಗಳ ದೇಶ ಎಂದು ಕರೆಯುತ್ತಿದ್ದರು. ಆದರೆ ಭಾರತ ಸಹೋದರತ್ವ, ಸಮಾನತೆ, ನ್ಯಾಯ ಮತ್ತು ಶ್ರೀಮಂತ ಸಂಸ್ಕೃತಿ ಹೊಂದಿದ ದೇಶವೆಂದು ಸಾರಿ ಭಾರತದ ಬಗ್ಗೆ ಇರುವ ಹಲವು ಕಳಂಕವನ್ನು ದೂರ ಮಾಡಿದ ಕೀರ್ತಿ ವಿವೇಕರಿಗೆ ಸಲ್ಲುತ್ತದೆ. ಇಂದಿನ ಯುವಕರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕೆಂದು ಯುವಕರಿಗೆ ಕರೆ ನೀಡಿದರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ರಾಜಗಿರಾ ಮಾತನಾಡಿ ಇಂದಿನ ಯುವಕರು ಬರೀ ಫೇಸ್‍ಬುಕ್ ವಾಟ್ಸಾಪ್, ಇನ್ಸ್ಟಾಗ್ರಾಮ್ ನಲ್ಲಿ ಬಿಜಿಯಾಗಿ ಗೊತ್ತು ಗುರಿಗಳನ್ನು ಮರೆತು ಬಾಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮ ಸ್ಟೇಟಸ್ ಸ್ಟೋರಿ, ನೋಡಿದವರು, ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ಫಾಲೋ ಮಾಡಿದವರು, ಲೈಕ್ ಕಮೆಂಟ್ ಮಾಡಿದವರು ನಮ್ಮ ಸಹಕಾರಕ್ಕೆ ಬರುವುದಿಲ್ಲ. ಅವರು ನಮಗೆ ಸಂಸ್ಕಾರ ಕಲಿಸುವುದಿಲ್ಲ. ಬದಲಾಗಿ ನಮಗೆ ನಾವೇ ಪರಿವರ್ತನೆಯಾಗಿ ಸಾಮಾಜಿಕ, ದೇಶಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕಾಗಿ ದುಡಿಯಬೇಕೆಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ ಕಾಳಸರತೂಗಾಂವ ಅಧ್ಯಕ್ಷರಾದ ಶಿವಕುಮಾರ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ “ಯುವಕರಲ್ಲಿ ದೇಶಭಕ್ತಿ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬಿತ್ತಿ ಬೆಳೆಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಯುವ ಶಾಂತಿ ದಿನಾಚರಣೆ ಆಚರಿಸಲಾಗುತಿದ್ದು, ಯುವಕರು ಜಾಗೃತರಾಗಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದರು. ವರದಿಗಾರರಾದ ಮಹಾರುದ್ರ ಡಾಕುಳಗೆ ವಂದಿಸಿದರು.
ವೇದಿಕೆ ಮೇಲೆ ಕಾಲೇಜಿನ ಪ್ರಾಚಾರ್ಯರಾದ ಸಿದ್ರಾಮ ಬಿಚಕುಂದೆ, ಕಾರ್ಯದರ್ಶಿ ಡಾ. ವಿಜಯಕುಮಾರ ಚೆಟ್ಟಿ, ನಿರ್ದೇಶಕ ಡಾ. ನಿತೇಶಕುಮಾರ ಬಿರಾದಾರ, ಉಪನ್ಯಾಸಕರಾದ ಸುಮಾ ಆರ್, ಅಂಬರೀಶ್ ಪಾಟೀಲ, ಮಮತಾ ಕೆ, ಅಶ್ವಿನಿ ಪಾಟೀಲ, ಶೇಕ್ ಅಫೆÇ್ರೀಜ್, ಅಶ್ವಿನಿ ಸುನೀಲ, ಜಯಶ್ರೀ ಮೇತ್ರೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.