ಭಾರತದ ಸಂವಿಧಾನ ಜಾಗತಿಕ ವಿಶ್ವಕೋಶ

ಕಲಬುರಗಿ : ಮಾ.11:ಭಾರತದ ಸಂವಿಧಾನವು ನಮ್ಮ ದೇಶಕಷ್ಟೆ ಸೀಮಿತವಲ್ಲ. ಇಡೀ ಜಗತ್ತಿನ ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸುತ್ತದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ವಿಶ್ವದಾದ್ಯಂತ ಸಾವಿರಾರು ಪಿ.ಎಚ್‍ಡಿ ಗ್ರಂಥಗಳು, ಲೇಖನಗಳು, ಚರ್ಚಾಗೋಷ್ಟಿಗಳು ಜರುಗಿವೆ. ಬೇರೆ ದೇಶಗಳು ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಭಾರತದ ಸಂವಿಧಾನವನ್ನು ಆಧಾರವನ್ನಾಗಿ ಅನುಸರಿಸುತ್ತಿರುವುದು ವಿಶ್ವಕ್ಕೆ ನಮ್ಮ ದೇಶದ ಸಂವಿಧಾನದ ಅವಶ್ಯಕತೆ ಕಂಡುಬರುತ್ತದೆ. ಸಂವಿಧಾನ ಉಳಿದರೆ ಮಾತ್ರ ದೇಶದ ರಕ್ಷಣೆ ಸಾಧ್ಯವಿದ್ದು, ಅದರ ಆಶಯಕ್ಕೆ ದಕ್ಕೆ ಬಾರದಂತೆ ಸಹ ಜೀವನ ಸಾಗಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪದ ‘ಚಿಗುರು ನಿರ್ಗತಿಕ, ಅನಾಥ ಮತ್ತು ನಿರ್ಲಕ್ಷಿತರ ನಿಲಯ’ದ ಆವರಣದಲ್ಲಿ ‘ಬಸವೇಶ್ವÀರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಸಂವಿಧಾನ ಜಾಗೃತಿ ಕಾರ್ಯಕ್ರಮ’ದಲ್ಲಿ ಸಂವಿಧಾನದ ಪೀಠಿಕೆ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ನಮ್ಮ ದೇಶದ ಸಂವಿಧಾನವು ಭಾರತದ ಸಮಗ್ರ ಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಜಾತ್ಯಾತೀತತೆ, ಸಮಾನತೆ, ಭಾತೃತ್ವ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ರಾಷ್ಟ್ರೀಯತೆಯಂತಹ ಮುಂತಾದ ಮೌಲ್ಯಗಳಿಂದ ಕಲ್ಯಾಣ ರಾಷ್ಟ್ರ ನಿರ್ಮಾಣ ಮಾಡುತ್ತದೆ. ಸಂವಿಧಾನ ದೇಶದ ರಕ್ಷಾ ಕವಚವಾಗಿ ಕಾರ್ಯ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿವಪುತ್ರ ಮಾಲಿ ಪಾಟೀಲ, ಕಾಮಣ್ಣ ಮದಗುಣಕಿ, ಸುಭದ್ರಾ ಬಿರಾದಾರ, ಶರಣಮ್ಮ ತಳವಾರ, ರುಕ್ಮೀಣಿ ಪಾಟೀಲ, ಚಂದ್ರಕಲಾ, ಮಹಾದೇವಿ ಮರಗುತ್ತಿ, ರತ್ನಾಬಾಯಿ ಸೇರಿದಂತೆ ಮತ್ತಿತರರಿದ್ದರು.