ಭಾರತದ ಶಕ್ತಿ, ಸಾಮರ್ಥ್ಯ ಸಾಬೀತುಪಡಿಸಿ ಕ್ರೀಡಾಪಟುಗಳಿಗೆ ಮೋದಿ ಕರೆ

ನವದೆಹಲಿ,ಜು.೨೦-ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಆಟಗಾರರು ತಮ್ಮ ಪರಾಕ್ರಮವನ್ನು ಜಗತ್ತಿಗೆ ತೋರಿಸಲು ಮುಂಬರುವ ದಿನಗಳು ಅತಿ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜುಲೈ ೨೮ ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭವಾಗುತ್ತದೆ. ಅದೇ ದಿನ ತಮಿಳುನಾಡಿನಲ್ಲಿ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಪ್ರಾರಂಭವಾಗಲಿದೆ. ಈ ಎರಡೂ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಅತಿಮುಖ್ಯ ಎಂದು ತಿಳಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುವ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಮುಂಬರುವ ಕ್ರೀಡಾಕೂಟಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ ಎಂದು ಶುಭಹಾರೈಸಿದರು.
ಒತ್ತಡವಿಲ್ಲದೆ ನಿಮ್ಮ ಎಲ್ಲಾ ಸಾಮರ್ಥ್ಯಗಳೊಂದಿಗೆ ಚೆನ್ನಾಗಿ ಆಟವಾಡಿ. ನೀವು ’ಕೋಯಿ ನಹೀ ಹೈ ತಕ್ಕರ್ ಮೇ, ಕ್ಯೂಂ ಪಡೆ ಹೋ ಚಕ್ಕರ್ ಮೇ’ ಎಂಬ ಮಾತನ್ನು ಕೇಳಿರಬೇಕು. ಆದ್ದರಿಂದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಾ ಮನೋಭಾವದಿಂದ ಆಟವಾಡಿ ಎಂದು ಸಲಹೆ ನೀಡಿದ್ದಾರೆ.
ಎರಡೂ ಮಹತ್ವದ ಕ್ರೀಡಾಕೂಟಗಳಲ್ಲಿ ಭಾರತೀಯ ಆಟಗಾರರ ಶಕ್ತಿ, ಸಾಮರ್ಥ್ಯವನ್ನು ಅನಾವರಣ ಮಾಡಿ, ಇತರರಿಗೆ ಮಾದರಿಯಾಗಿ ಎಂದು ಅವರು ಕಿವಿಮಾತು ಹೇಳಿದ್ದಾರೆ.
ತಪ್ಪುಮಾಡದಿರಿ:
ಪ್ರತಿಷ್ಠಿತ ಕ್ರೀಡಾಕೂಟದಲ್ಲಿ “ಯಾವುದೇ ತಪ್ಪು ಮಾಡಬೇಡಿ, ವಿಶ್ವ ದರ್ಜೆಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಿ ಎಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ.
“ನಾವು ನಮ್ಮ ಪ್ರಬಲ ತಂಡಗಳಲ್ಲಿ ಒಂದನ್ನು ಕಾಮನ್ ವೆಲ್ತ್‌ಗೆ ಕಳುಹಿಸುತ್ತಿದ್ದೇವೆ ಮತ್ತು ಶೂಟಿಂಗ್ ಇಲ್ಲದಿರುವ ಬಲವಾದ ಕ್ರೀಡೆಯೊಂದಿಗೆ ಸಹ, ಕಳೆದ ಆವೃತ್ತಿಯಿಂದ ಕಾರ್ಯಕ್ಷಮತೆ ಉತ್ತಮಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ೩೨೨ ತಂಡ ಕಳುಹಿಸುತ್ತಿದೆ. ಈ ತಂಡದಲ್ಲಿ ೨೧೫ ಕ್ರೀಡಾಪಟುಗಳು ಮತ್ತು ೧೦೭ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದಾರೆ. ಪಂದ್ಯಾವಳಿ ಜುಲೈ ೨೮ ರಿಂದ ಆಗಸ್ಟ್ ೮ರವರೆಗೆ ನಡೆಯಲಿದೆ.
ಸಂವಾದದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸೇರಿದಂತೆ, ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.