ಭಾರತದ ವೇಗದ ಬೌಲರ್ ಮಹಮ್ಮದ್ ಸಿರಾಜ್ ಗೆ ಪಿತೃ ವಿಯೋಗ

ಹೈದರಾಬಾದ್, ನ.20-ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿರುವ ವೇಗದ ಬೌಲರ್ ಮಹಮ್ಮದ್ ಸಿರಾಜ್ ಅವರ ತಂದೆ ಮಹಮ್ಮದ್ ಗೌಸ್(53) ನಿಧನರಾಗಿದ್ದಾರೆ.

ಹೈದರಾಬಾದ್‌ನಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿರಾಜ್,
ನನ್ನ ದೇಶವನ್ನು ನೀನು ಹೆಮ್ಮೆ ಪಡುವಂತೆ ಮಾಡು ಎಂದು ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರು. ಖಂಡಿತವಾಗಿಯೂ ತಂದೆಯ ಆಸೆ ಈಡೇರಿಸುವೆ. ನನ್ನ ತಂದೆ ಆಟೋ ರಿಕ್ಷಾವನ್ನು ಚಲಾಯಿಸುತ್ತಾ ಕ್ರಿಕೆಟ್ ಮೇಲಿನ ನನ್ನ ಉತ್ಸಾಹವನ್ನು ಮುಂದುವರಿಸಲು ಎಷ್ಟೊಂದು ಕಷ್ಟಪಟ್ಟಿದ್ದರು ಎಂದು ನನಗೆ ಚೆನ್ನಾಗಿ ಗೊತ್ತಿದೆ. ತಂದೆಯ ನಿಧನದ ಸುದ್ದಿ ಕೇಳಿ ಆಘಾತವಾಯಿತು ಎಂದಿದ್ದಾರೆ.

ಅಲ್ಲದೆ, ಸಿರಾಜ್ ಸಿಡ್ನಿಯಲ್ಲಿ ರಾಷ್ಟ್ರೀಯ ತಂಡದೊಂದಿಗೆ ಅಭ್ಯಾಸ ನಡೆಸಿ ತಮ್ಮ ಕೊಠಡಿಗೆ ವಾಪಸಾದಾಗ ತಂದೆಯ ನಿಧನದ ಸುದ್ದಿ ಅವರಿಗೆ ಗೊತ್ತಾಗಿದೆ. ಸದ್ಯ
ಆಸ್ಟ್ರೇಲಿಯದಲ್ಲಿ ಕ್ವಾರಂಟೈನ್ ನಿಯಮ ಜಾರಿಯಲ್ಲಿರುವ ಕಾರಣದಿಂದಾಗಿ ಸಿರಾಜ್‌ಗೆ ತನ್ನ ತಂದೆಯ ಅಂತಿಮ ಕ್ರಿಯೆಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು‌ ಹೇಳಲಾಗುತ್ತಿದೆ.