ಭಾರತದ ವಿರುದ್ಧ 10 ವಿಕೆಟ್ ಪಡೆದ ಕಿವೀಸ್ ಬೌಲರ್ ಎಜಾಜ್

ಮುಂಬೈ,ಡಿ.೪- ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ೨ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಎಲ್ಲ ೧೦ ವಿಕೆಟ್‌ಗಳನ್ನು ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತದ ಮಾಜಿ ಸ್ಪಿನ್ ಬೌಲರ್ ಅನಿಲ್‌ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ೧೦ ವಿಕೆಟ್ ಪಡೆದ ವಿಶ್ವದ ೩ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಟೇಲ್ ಭಾಜನರಾಗಿದ್ದಾರೆ. ವಿಶೇಷವೆಂದರೆ ಪಟೇಲ್ ಮುಂಬೈ ಮೂಲದವರಾಗಿದ್ದಾರೆ.
ತಾವು ಹುಟ್ಟಿದೂರಲ್ಲೇ ಈ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಪಟೇಲ್ ಅವರು ೪೭.೫ ಓವರ್‌ಗಳಲ್ಲಿ ೧೧೯ ರನ್ ನೀಡಿ ೧೦ ವಿಕೆಟ್ ಕಬಳಿಸಿದ್ದಾರೆ.
ಭಾರತದ ಅನಿಲ್‌ಕುಂಬ್ಳೆ ಪಾಕಿಸ್ತಾನದ ವಿರುದ್ಧ ೧೯೯೯ರಲ್ಲಿ ನಡೆದ ೨ನೇ ಟೆಸ್ಟ್ ಪಂದ್ಯದಲ್ಲಿ ೭೪ ರನ್ ನೀಡಿ ೧೦ ವಿಕೆಟ್ ಪಡೆದು ೨ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಈ ಹಿಂದೆ ಇಂಗ್ಲೆಂಡ್‌ನ ಜೆಸಿ ಲ್ಯಾಕರ್ ೫೧.೨ ಓವರ್‌ಗಳಲ್ಲಿ ೫೩ ರನ್ ನೀಡಿ ೧೦ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದರು.
೧೯೯೯ರಲ್ಲಿ ಅನಿಲ್‌ಕುಂಬ್ಳೆ ಪಾಕಿಸ್ತಾನದ ವಿರುದ್ಧ ಎಲ್ಲ ೧೦ ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಈ ಅಭೂತಪೂರ್ವ ಸಾಧನೆ ಮಾಡಿರುವ ಎಜಾಜ್ ಪಟೇಲ್ ಅವರನ್ನು ಭಾರತದ ಮಾಜಿ ಸ್ಪಿನ್ ಬೌಲರ್ ಅನಿಲ್‌ಕುಂಬ್ಳೆ ಅಭಿನಂದಿಸಿದ್ದಾರೆ.
೩೨೫ ರನ್‌ಗೆ ಸರ್ವ ಪತನ
ಇದಕ್ಕೂ ಮುನ್ನ ಪಟೇಲ್ ದಾಳಿಗೆ ತತ್ತರಿಸಿದ ಭಾರತ, ೩೨೫ ರನ್‌ಗಳಿಗೆ ಸರ್ವಪತನ ಕಂಡಿತು. ಶತಕ ಸಿಡಿಸಿದ ಮಯಾಂಕ್ ಅಗರ್‌ವಾಲ್, ೧೫೦ ರನ್ ಗಳಿಸಿ ಔಟಾದರು. ಅಕ್ಷರ್‌ಪಟೇಲ್ ೫೨, ಜಯಂತ್ ಯಾದವ್ ೧೨, ವೃದ್ಧಿಮಾನ್ ಸಾಹ ೨೭ ರನ್ ಗಳಿಸಿ ಔಟಾದರು.