ಭಾರತದ ಯುವಶಕ್ತಿ ಜಗತ್ತಿನಲ್ಲಿಯೇ ಬಲಿಷ್ಠ

ಭಾಲ್ಕಿ:ಎ.6: ಭಾರತ ಬುದ್ಧಿವಂತರ ರಾಷ್ಟ್ರವಾಗಿದೆ. ಇಲ್ಲಿನ ಯುವಶಕ್ತಿ ಜಗತ್ತಿನಲ್ಲಿಯೇ ಬಲಿಷ್ಠ ಹೊಂದಿದೆ. ನಮ್ಮ ಯುವ ಸಮುದಾಯದ ಪ್ರತಿಭೆ ಸದ್ಬಳಕೆಯಾದರೇ ಭಾರತ ಇನ್ನಷ್ಟು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಜಯಪುರದ ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ಚನ್ನಬಸವೇಶ್ವರ ಗುರುಕುಲ ವಸತಿ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರೇರಣಾ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಯುವಕರ ಪ್ರತಿಭೆ ರಕ್ತಗತವಾಗಿದೆ. ಆ ಕಾರಣಕ್ಕಾಗಿಯೇ ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲಿಯು ಕೂಡ ಭಾರತ ಮೂಲದ ಯುವಕರು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸೇರಿ ಮುಂತಾದ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ನಮ್ಮ ಯುವ ಶಕ್ತಿಯನ್ನು ಯಾವ ರಾಷ್ಟ್ರದಿಂದ ಮಣಿಸಲು ಸಾಧ್ಯವಿಲ್ಲ. ಅಂತಹ ಪ್ರತಿಭಾವಂತರಿಂದ ಕೂಡಿದ ರಾಷ್ಟ್ರ ನಮ್ಮದಾಗಿದೆ.
ಆದರೆ ದೇಶದ ಶಿಕ್ಷಣ ನೀತಿ ಸರಿ ಇಲ್ಲದ ಕಾರಣ ನಮ್ಮಲ್ಲಿನ ಪ್ರತಿಭೆಗಳಿಗೆ ನಾವೇ ಅಡ್ಡಗಾಲು ಹಾಕುತ್ತಿದ್ದೇವೆ ಎಂದು ಕಳವಳ ವ್ಯಕ್ತ ಪಡಿಸಿದರು.
ನಮ್ಮಲ್ಲಿಯ ಶಿಕ್ಷಣದ ವ್ಯವಸ್ಥೆ ಬದಲಾದರೇ ಇಡೀ ಜಗತ್ತಿನ ಜನ ಭಾರತದ ಕಡೆ ಮುಖ ಮಾಡಲಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಶಕ್ತಿಯ ಮೇಲೆ ನಂಬಿಕೆ ವಿಶ್ವಾಸ ಇರಬೇಕು. ನನ್ನಿಂದ ಆಗದು ಎನ್ನುವ ಮಾತೇ ಬರಬಾರದು. ಬಡತನ ಪ್ರತಿಭೆಗೆ ಎಂದಿಗೂ ಅಡ್ಡಿ ಬರುವುದಿಲ್ಲ. ಕಷ್ಟಗಳು ದೇವರು ಕೊಟ್ಟ ವರ ಎಂದು ತಿಳಿದು ಮುನ್ನಡೆದರೆ ಸಾಧಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಅಬ್ರಾಹಂ ಲಿಂಕ್‍ನ, ಮೇರಿ ಕ್ಯೂರಿ ಬಡತನದಲ್ಲಿ ಹುಟ್ಟಿದರೂ ಕೂಡ ತಮ್ಮ ಪ್ರತಿಭೆ ಮೂಲಕ ಕೊಡುಗೆ ನೀಡಿದ್ದರು ಅಂತವರ ಆದರ್ಶ ಎಲ್ಲರೂ ಪಾಲಿಸಿದರೇ ಅಸಾಧ್ಯವಾದದನ್ನು ಸಾಧ್ಯವಾಗಿ ತೋರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೊತಿರ್ಮಯನಾಂದ ಮಹಾರಾಜ್ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸದಾನಂದ ಜೋಶಿ, ಪತ್ರಕರ್ತ ಸಿದ್ದು ಪಾಟೀಲ್, ಯುವ ಮುಖಂಡ ಶಿವು ಲೋಖಂಡೆ, ಉದ್ಯಮಿ ಜಯರಾಜ ಖಂಡ್ರೆ, ಮಕ್ಕಳ ತಜ್ಞ ಡಾ.ಜಿ.ಎಸ್ ಭುರಾಳೆ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇದ್ದರು.
ಸನ್ಮಾನ
ಇದೇ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ನೇಮಕ ಆಗಿರುವ ಶಶಿಧರ ಕೋಸಂಬೆ ದಂಪತಿಗಳನ್ನು ಸನ್ಮಾನಿಸಲಾಯಿತು. ನಿರ್ಭಯಾನಂದ ಸ್ವಾಮೀಜಿ, ಜ್ಯೋರ್ತಿಮಯನಂದ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು ಸನ್ಮಾನಿಸಿ, ಅಭಿನಂದಿಸಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.