ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ: ಪ್ರೊ. ಸ್ವರೂಪರಾಣಿ ಚಲ್ಲಪಲ್ಲಿ

ಕಲಬುರಗಿ.ಜ.13:ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆಯವರು ಎಂದು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ್ ವಿಶ್ವವಿದ್ಯಾಲಯದ ಮಹಾಯಾನ ಬೌದ್ಧ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಪ್ರೊ. ಸ್ವರೂಪರಾಣಿ ಚಲ್ಲಪಲ್ಲಿ ಅವರು ಹೇಳಿದರು.
ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ‘ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ’ ಹಾಗೂ ‘ಸಮಾನ ಅವಕಾಶಗಳ ಘಟಕ’ದ ವತಿಯಿಂದ ವಿಶ್ವವಿದ್ಯಾಲಯದಲ್ಲಿನ ಆಡಳಿತ ಭವನದಲ್ಲಿ ಹಮ್ಮಿಕೊಂಡ ಅಕ್ಷರದಾತೆ ಮಾತೆ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನದ ಅಂಗವಾಗಿನ ವಿಶೇಷ ವೆಬಿನಾರ್‍ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಆಧುನಿಕ ಭಾರತ ಕಂಡ ಮಹಾನ್ ಸಮಾಜ ಪರಿವರ್ತನಕಾರರಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಪ್ರಮುಖರು. ‘ಸತ್ಯಶೋಧಕ ಸಮಾಜ’ ಎಂಬ ಸಂಘಟನೆಯನ್ನು ಕಟ್ಟುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿದರು ಎಂದರು.
ಸತ್ಯಶೋಧಕ ಸಮಾಜ’ವು ಸಾಮಾಜಿಕ ಸತ್ಯವನ್ನು ಅರಿಯಲು ಪ್ರಯತ್ನಿಸಿತ್ತಲ್ಲದೆ, ಅಸ್ಪøಶ್ಯತೆಯನ್ನು ಹೋಗಲಾಡಿಸುವುದು ಅದರ ಪ್ರಮುಖ ಗುರಿಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ದೇಶದಲ್ಲಿ ಮೊಟ್ಟಮೊದಲ ಮಹಿಳಾ ಶಾಲೆಯನ್ನು ತೆರೆದ ಶಿಕ್ಷಣ ಪ್ರೇಮಿಗಳು. ಸಮಾನತೆ, ಸಾಮಾಜಿಕನ್ಯಾಯ, ಶಿಕ್ಷಣದ ಮಹತ್ವವನ್ನು ಸಾರಿದ ಧೀಮಂತರು. ಮಾತೆ ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಅವರು ಹೇಳಿದರು.
ಯಾವುದೇ ಸಮಾಜ ಮೌಢ್ಯ-ಕಂದಾಚಾರ-ಅಂಧಕಾರದಿಂದ ಬಿಡುಗಡೆ ಹೊಂದಬೇಕಾದರೆ ಮಹಿಳೆ ವಿದ್ಯಾವಂತಳಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಷ್ಟೇ ಸಮಾನ ಅವಕಾಶ, ಹಕ್ಕು ಲಭಿಸಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದ ಆದರ್ಶ ಮಹಿಳೆ, ಹೋರಾಟಗಾರ್ತಿ, ವೈಚಾರಿಕ ಚಿಂತಕಿ ಸಾವಿತ್ರಿಬಾಯಿ ಫುಲೆ. ಮೇಲ್ವರ್ಗದ ವಿಧವೆಯರ ಬಿಡುಗಡೆಗಾಗಿ ಹೋರಾಡಿದವರು ಎಂದು ಅವರು ತಿಳಿಸಿದರು.
ಬಾಲ್ಯವಿವಾಹ, ವಿಧವಾ ಪದ್ಧತಿ, ದೇವದಾಸಿ ಪದ್ಧತಿಯ ವಿರುದ್ಧ ದನಿ ಎತ್ತಿದವರು. ಪ್ರಾಚೀನ ಗುರುಕುಲ ವ್ಯವಸ್ಥೆಯು ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದು, ಶೋಷಿತ ಸಮುದಾಯಗಳಿಗೆ ಶಿಕ್ಷಣದ ಅವಕಾಶವನ್ನು ವಂಚಿಸಲಾಗಿತ್ತು. ಇದನ್ನು ಮನಗಂಡ ಫುಲೆ ದಂಪತಿಗಳು ಪುಣೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅನೇಕ ಶಾಲೆ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ, ಮಹಿಳೆಯರು ಹಾಗೂ ತಳಸಮುದಾಯದವರಿಗೆ ಶಿಕ್ಷಣ ಪಡೆಯುವ ಅವಕಾಶವನ್ನು ನಿರ್ಮಿಸಿಕೊಟ್ಟರು ಎಂದು ಅವರು ಹೇಳಿದರು.
ತಳಸಮುದಾಯಗಳು ಹಾಗೂ ಮಹಿಳೆಯರು ತಮ್ಮ ಹಕ್ಕನ್ನು ಅರಿತುಕೊಳ್ಳಲು ಇಂಗ್ಲೀಷ ಶಿಕ್ಷಣ ಅತ್ಯಗತ್ಯವೆಂದು ಫುಲೆಯವರು ಪ್ರತಿಪಾದಿಸಿದರು. ಫುಲೆ ಅವರ ಸಾಮಾಜಿಕ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸಿದ, ಶಾಲೆ ಆರಂಭಿಸಲು ತಮ್ಮ ಮನೆಯನ್ನೆ ನೀಡದ ಮುಸ್ಲಿಂ ಸಮುದಾಯದ ಫಾತಿಮಾ ಶೇಕ್ ಮತ್ತು ಅವರ ಸಹೋದರರನ್ನು ಗೌರವಪೂರ್ಣವಾಗಿ ಸ್ಮರಿಸಬೇಕಿದೆ. ಹಿನ್ನೆಲೆಯಲ್ಲಿ ಸಹಕರಿಸಿದ ಸಾವಿತ್ರಿಬಾಯಿ ಫುಲೆಯವರ ‘ಕಾವ್ಯಫುಲೆ’ ಎಂಬ ಕವನ ಸಂಕಲನ ಹಾಗೂ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಫುಲೆಯವರ ಭಾಷಣಗಳು’ ಅವರ ಹೋರಾಟ ಬದುಕನ್ನು ಅರಿಯಲು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು.
ಫುಲೆ ದಂಪತಿಗಳು ಪ್ರತಿಪಾದಿಸಿದ ಸಾಮಾಜಿಕ ಹೋರಾಟದ ಆಶಯ, ಶೈಕ್ಷಣಿಕ ಚಿಂತನೆ, ಲಿಂಗಸಮಾನತೆಯ ಮೌಲ್ಯಗಳು ಇಂದಿನ ಭಾರತಕ್ಕೆ ಮಾದರಿಯಾಗಬೇಕಿದೆ. ಗೌತಮಬುದ್ಧ, ಫುಲೆ, ಡಾ. ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್, ಮೊದಲಾದ ಪ್ರಗತಿಪರ ಚಿಂತಕರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವಿ. ಅಳಗವಾಡಿ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಸಾಧನೆಗೆ ಶಿಕ್ಷಣ ಅತ್ಯಂತ ಭದ್ರ ಬುನಾದಿಯಾಗಿದೆ. ಮಹಿಳೆಯರ ಶಿಕ್ಷಣಕ್ಕೆ ಅವಕಾಶವಿಲ್ಲದಿದ್ದ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿ ಮಾತೆ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ಅಕ್ಷರ ಅಭ್ಯಾಸ ಮಾಡಿಸಿ ಶಿಕ್ಷಕಿಯನ್ನಾಗಿ ರೂಪಿಸಿದ್ದು ಮಹತ್ವದ ಸಾಧನೆ. ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಆದರ್ಶ ಪುರುಷನಿರುತ್ತಾನೆ ಎಂಬುದಕ್ಕೆ ಜ್ಯೋತಿಬಾ ಫುಲೆ ಉದಾಹರಣೆ ಎಂದರು.
ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡಲು ಶಾಲೆಗೆ ಹೋಗುವಾಗ ಸಾವಿತ್ರಿಬಾಯಿ ಫುಲೆ ಅವರ ಮೇಲೆ ಸಗಣಿಯನ್ನು ಎರಚಲಾಯಿತು, ಕಲ್ಲಿನಿಂದ ಹೊಡೆಯಲಾಯಿತು. ಈ ಎಲ್ಲಾ ಬಗೆಯ ಅವಮಾನಗಳನ್ನು ಸಹಿಸಿಕೊಂಡು ಧೈರ್ಯದಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ ನಮ್ಮ ದೇಶ ಕಂಡ ದಿಟ್ಟ ಮಹಿಳೆ. ಫುಲೆ ದಂಪತಿಗಳಂತಹ ಮಹಾನ್ ಚೇತನಗಳ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಅಪ್ಪಗೆರೆ ಸೋಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯಗಳೆಂಬ ಬೌದ್ಧಿಕ ಭೂಮಿಯನ್ನು ಹದಗೊಳಿಸಿ, ಅಲ್ಲಿರುವ ಮುಳ್ಳು-ಕಂಟಿಗಳೆಂಬ ವಿಷದ ಕಳೆಗಳನ್ನು ಕಿತ್ತು, ತಗ್ಗು-ದಿಣ್ಣೆಗಳನ್ನು ಸಮಗೊಳಿಸಬೇಕಿದೆ. ಹದಗೊಂಡ ಭೂಮಿಯಲ್ಲಿ ಬುದ್ಧ-ಬಸವಣ್ಣ-ಫುಲೆ-ಅಂಬೇಡ್ಕರ್-ಗಾಂಧೀಜಿ ಮೊದಲಾದ ಮಹಾತ್ಮರ ವೈಚಾರಿಕ ಚಿಂತನೆಗಳೆಂಬ ಬೀಜಗಳನ್ನು ಬಿತ್ತಿ ‘ಸರ್ವಜನಾಂಗದ ಶಾಂತಿಯ ತೋಟ’ವನ್ನು ಬೆಳೆಯಬೇಕಿದೆ. ಅದಕ್ಕಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ರೈತರಾಗಬೇಕಿದೆ. ಇದು ಸಾಕಾರಗೊಳ್ಳಬೇಕಾದರೆ ಫುಲೆ ದಂಪತಿಗಳ -ಬದುಕು-ಹೋರಾಟ-ವ್ಯಕ್ತಿತ್ವ-ಚಿಂತನೆಗಳು ಮಾದರಿಯಾಗಬೇಕಿದೆ. ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಶಿಕ್ಷಕರ ಆತ್ಮಾವಲೋಕನದ ದಿನವಾಗಬೇಕಿದೆ. ಆದರ್ಶ ವ್ಯಕ್ತಿಗಳ ಜನ್ಮದಿನಗಳು ಕೇವಲ ಆಚರಣೆಗಳಾಗದೆ, ಅವರ ಚಿಂತನೆಗಳ ಅನುಸರಣೆಗಳಾಗಬೇಕಿದೆ ಎಂದರು.
ಮುಖ್ಯ ಅತಿಥಿ ವಾಣಿಜ್ಯ ಅಧ್ಯಯನ ನಿಕಾಯದ ಡೀನ್ ಪ್ರೊ. ಕೆ. ಪದ್ಮಶ್ರೀಯವರು ಮಾತನಾಡಿ, ಹಲವಾರು ಅಡೆತಡೆಗಳ ಮಧ್ಯೆಯೂ ಸಾವಿತ್ರಿಬಾಯಿ ಫುಲೆಯವರು ಮಹಿಳಾ ಶಿಕ್ಷಣಕ್ಕಾಗಿ ನಿರಂತರವಾಗಿ ಶ್ರಮಿಸಿದರು. ಸಾವಿತ್ರಿಬಾಯಿ ಫುಲೆ ಅವರ ಸಾಧನೆಯ ಹಿಂದೆ ಜ್ಯೋತಿಬಾ ಫುಲೆ ಅವರ ಪ್ರೋತ್ಸಾಹ, ಸಹಕಾರವಿದೆ. ಪುರುಷರು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಜ್ಯೋತಿಬಾ ಫುಲೆ ಅವರಿಂದ ಕಲಿಯಬೇಕಿದೆ ಎಂದರು.
ಅತಿಥಿಗಳಾಗಿದ್ದ ಕುಲಸಚಿವ ಪ್ರೊ. ಮುಷ್ತಾಕ್ ಅಹಮದ್ ಐ. ಪಟೇಲ್ ಅವರು ಮಾತನಾಡಿ, ಮಹಿಳೆಯರ ಸಮಾನತೆ, ಸ್ವಾತಂತ್ರ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಚಳವಳಿ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ. ಪ್ರಮುಖವಾಗಿ ಹೆಣ್ಣು ಮಕ್ಕಳು ಸಾವಿತ್ರಿಬಾಯಿ ಫುಲೆಯವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಡಾ. ರಮ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ. ರೇಷ್ಮಾ ನದಾಫ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿ ವಿವೇಕಾನಂದ್ ಸಜ್ಜನ ಅವರು ಆಶಯಗೀತೆ ಹಾಡಿದರು. ವಿಶ್ವವಿದ್ಯಾಲಯದ ಸಮಾನ ಅವಕಾಶಗಳ ಘಟಕದ ಸಂಯೋಜಕ ಡಾ. ಶಿವಕುಮಾರ್ ದೀನೆ ಹಾಗೂ ವಿವಿಧ ನಿಕಾಯಗಳ ಡೀನರು, ವಿಭಾಗಗಳು ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿವರ್ಗದವರು, ಸಂಶೋಧನಾ-ಸ್ನಾತಕೊತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆನ್‍ಲೈನ್ ಮೂಲಕ ಹಲವರು ಕಾರ್ಯಕ್ರಮವನ್ನು ವೀಕ್ಷಿಸಿದರು.