ಭಾರತದ ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿ : ಆರ್ಯ

ತುಮಕೂರು, ಜು. ೧೨- ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಯಶಸ್ವಿ ಪ್ರಜಾಪ್ರಭುತ್ವವನ್ನು ಹೊಂದಿದೆ ಎಂದು ಕೆನಾಡ ಸಂಸತ್ ಸದಸ್ಯರಾದ ಚಂದ್ರಕಾಂತ್ ಆರ್ಯ ಹೇಳಿದರು.
ಎಷ್ಟೋ ರಾಷ್ಟ್ರಗಳು ಕಳೆದ ೭೫ ವರ್ಷದಲ್ಲಿ ಪ್ರಜಾಪ್ರಭುತ್ವನ್ನು ಹೊಂದಿಲ್ಲ. ಆದರೆ ಭಾರತ ಯಶಸ್ವಿ ಪ್ರಜಾಪ್ರಭುತ್ವನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎನಿಸುತ್ತದೆ ಎಂದರು.
ನಗರದಲ್ಲಿ ಹಾಲಪ್ಪ ಪ್ರತಿಷ್ಠಾನ, ಮಾತೃಛಾಯ ಸಂಸ್ಥೆ, ಲಯನ್ಸ್, ರೋಟರಿ, ಛೇಂಬರ್‍ಸ್ ಆಫ್ ಕಾಮರ್ಸ್, ಆದರ್ಶ ಫೌಂಡೇಷನ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಭಾರತ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಬಿಎಚ್‌ಇಎಲ್, ಹೆಚ್‌ಎಎಲ್ ಹಿಂದೂಸ್ತಾನ್ ಮಿಷನ್ ಟೂಲ್ಸ್, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಯಿಂದ ಅನೇಕರಿಗೆ ಉದ್ಯೋಗಗಳು ಲಭಿಸಿವೆ. ಹೀಗೆ ವಿವಿಧ ರೀತಿಯಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಾ ಮುಂದೆ ಸಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಳೆದ ೫೫ ವರ್ಷಗಳಿಗೆ ಹೋಲಿಸಿದರೆ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ನಾನು ಪ್ರತಿಸಲ ಭಾರತಕ್ಕೆ ಬಂದಾಗ ನನ್ನ ತವರು ಸಿರಾ ತಾಲ್ಲೂಕು ದ್ವಾರಾಳು ಗ್ರಾಮಕ್ಕೆ ಭೇಟಿ ನೀಡುವುದು ವಾಡಿಕೆ. ಕೆಲವೊಂದು ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಚರಂಡಿ, ರಸ್ತೆ ಸೇರಿದಂತೆ ಇನ್ನೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದರು.
ಈ ಹಿಂದೆ ಶೌಚಾಲಯಗಳಿರಲಿಲ್ಲ, ಕೆಲವೊಂದು ಕಡೆ ನೀರಿನ ಸಮಸ್ಯೆಯೂ ಇತ್ತು. ಈಗ ಶೇ.೮೦ ರಷ್ಟು ಶೌಚಾಲಯಗಳಿವೆ. ಕೆಲವು ಕಡೆ ನೀರಿನ ಕೊರತೆಯೂ ಇಲ್ಲದಿರಬಹುದು. ಆದರೆ ಇನ್ನೂ ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಒಂದು ಕಾಲದಲ್ಲಿ ನಮ್ಮನ್ನಾಳಿದ ಬ್ರಿಟೀಷರ ದೇಶದಲ್ಲಿ ನಮ್ಮ ಕನ್ನಡಿಗರು ಸಂಸತ್ ಸದಸ್ಯರಾಗಿ ಆಳ್ವಿಕೆ ನಡೆಸುತ್ತಿದ್ದಾರೆ ಎಂದರೆ ನಮಗೆ ಇದಕ್ಕಿಂತ ಹೆಮ್ಮೆಯ ವಿಷಯ ಬೇರೊಂದಿಲ್ಲ ಎಂದರು.
ಇಂದಿನ ಪ್ರಸ್ತುತ ಸಂದರ್ಭದಲ್ಲಿ ಭಾರತೀಯರು ವಿಶ್ವದ ಯಾವುದೇ ರಾಷ್ಟ್ರದಲ್ಲಿ ಯಾವುದೇ ಸ್ಥಾನಮಾನದಲ್ಲಿ ಗುರುತಿಸಿಕೊಂಡಿರಬಹುದು. ಅದು ಇಂಜಿನಿಯರ್, ಡಾಕ್ಟರ್, ಶಿಕ್ಷಕರು, ಉಪನ್ಯಾಸಕರು, ವಿಜ್ಞಾನಿಗಳಾಗಿರಬಹುದು, ಇವರೆಲ್ಲಾ ರಾಜಕೀಯ ಹೊರತಾಗಿ ಗುರುತಿಸಿಕೊಂಡಿದ್ದರೆ, ಅಮೆರಿಕಾ ಉಪ ರಾಷ್ಟ್ರಪತಿಯಾಗಿ ಭಾರತೀಯರೇ ಆಗಿದ್ದಾರೆ. ಕೆನಡ ಸಂಸತ್ ಸದಸ್ಯರಾಗಿ ನಮ್ಮ ಕನ್ನಡಿಗರಾದ ನಮ್ಮ ಜಿಲ್ಲೆಯವರೇ ಆದ ಚಂದ್ರಕಾಂತ್ ಆರ್ಯ ಅವರಿದ್ದಾರೆ. ಹೀಗೆ ಭಾರತೀಯರೂ ಕೂಡ ಇತರೇ ರಾಷ್ಟ್ರಗಳಲ್ಲಿ ಆಳ್ವಿಕೆ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಡಾ.ಕೆ.ವಿದ್ಯಾಕುಮಾರಿ, ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯ, ಆಡಿಟರ್ ಆಂಜಿನಪ್ಪ, ಸಾಗರನಹಳ್ಳಿ ಪ್ರಭು, ಪ್ರೊ.ಕೆ.ಚಂದ್ರಣ್ಣ, ಆರ್. ಕಾಮರಾಜು ಮತ್ತಿತರರು ಭಾಗವಹಿಸಿದ್ದರು.