ಭಾರತದ ದಾಳಿ ಭೀತಿಗೆ ನಡುಗಿದ ಪಾಕ್ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್, ಅ.೨೯-ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಯ ಕಾರಣವನ್ನು ಸ್ವತಃ ಪಾಕಿಸ್ತಾನದ ಸಂಸದ ಅಯಾಸ್ ಸಾಧಿಕ್ ಬಿಚ್ಚಿಟ್ಟಿದ್ದು, ಅಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಆ ಘಟನೆಯನ್ನು ನೆನಪಿಸಿಕೊಂಡಿರುವ ಪಾಕಿಸ್ತಾನದ ಸಂಸದ, ಆ ವೇಳೆ ಭಾರತ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಹೇಳಿದ್ದಾರೆ.
ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದ ಬಳಿಕ ಸಂಸದೀಯ ನಾಯಕರೊಂದಿಗೆ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ ’ನಾವು ಅಭಿನಂದನ್ ಅವರನ್ನು ವಶಕ್ಕೆ ಪಡೆದಿರುವುದರಿಂದ ಭಾರತ ನಮ್ಮ ದೇಶದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದರು.
ಅಷ್ಟರಲ್ಲಾಗಲೇ ಮಿಲಿಟರಿ ಚೀಫ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು. ಅದಾದ ಬಳಿಕ ಸಭೆಯಲ್ಲಿ ಚರ್ಚೆ ಮಾಡಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಪಾಕ್ ಸಂಸದ ಅಯಾಸ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇನ್ನು, ಪಾಕಿಸ್ತಾನದ ಸಂಸದ ಅಯಾಸ್ ಸಾಧಿಕ್ ಮಾತನಾಡಿರುವ ಈ ವಿಡಿಯೋವನ್ನು ನಿವೃತ್ತ ಮೇಜರ್ ಗೌರವ್ ಆರ್ಯ ಸೇರಿದಂತೆ ಹಲವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಏನಿದು ಘಟನೆ?
ಭಾರತದ ವಾಯುಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್-೧೬ ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ಮಿಗ್ ೨೧ ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ೨೦೧೯ರ ಫೆಬ್ರವರಿಯಲ್ಲಿ ಹೊಡೆದುರುಳಿಸಲಾಗಿತ್ತು.
ಆಗ ಪಿಓಕೆ ಜಾಗದೊಳಗೆ ಪ್ರವೇಶಿಸಿದ್ದ ಅಭಿನಂದನ್ ಅವರ ಯುದ್ಧವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ನಂತರ ಅಭಿನಂದನ್ ಅವರನ್ನು ಪಾಕಿಸ್ತಾನ ತನ್ನ ವಶಕ್ಕೆ ಪಡೆದಿತ್ತು. ಬಳಿಕ ಉಭಯ ದೇಶಗಳ ನಡುವಿನ ಹಲವು ಸುತ್ತಿನ ಮಾತುಕತೆಯ ನಂತರ ಅಟ್ಟಾರಿ ವಾಘಾ ಗಡಿಯ ಮೂಲಕ ಪಾಕಿಸ್ತಾನ ಅಭಿನಂದನ್ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು.
ಮಾರ್ಚ್ ೧ರಂದು ಭಾರತಕ್ಕೆ ಹಸ್ತಾಂರವಾಗಿದ್ದ ಅಭಿನಂದನ್ ವರ್ಧಮಾನ್ ಅವರಿಗೆ ಸ್ವಾತಂತ್ರ್ಯೋತ್ಸವದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೀರಚಕ್ರ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.