ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್‍ರಿಂದ ಮಹತ್ತರ ಕೊಡುಗೆ: ಡಾ. ಸಿರನೂರಕರ್

ಕಲಬುರಗಿ.ಅ.31:ಸ್ವಾತಂತ್ರ್ಯದ ನಂತರ ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ್ ಅವರು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಓಮವಾರ ಹಮ್ಮಿಕೊಂಡ ರಾಷ್ಟ್ರೀಯ ಏಕತಾ ದಿನ ಮತ್ತು ಜಾಗೃತ ಜಾಗೃತಿ ಸಪ್ತಾಹ-2022ರ ಸಂದರ್ಭದಲ್ಲಿ ಮಾತನಾಡಿದ ಅವರು, ಹೈದ್ರಾಬಾದ್‍ನ ಜನರು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುವಂತೆ ಮತ್ತು ಸ್ವಾತಂತ್ರ್ಯ ಭಾರತದ ಭಾಗವಾಗುವಂತೆ ಮಾಡಿದ ಅವರ ಸಮರ್ಪಣೆಯನ್ನು ನಾವು ಮರೆಯಬಾರದು ಎಂದರು.
ಕುಲಸಚಿವ ಪ್ರೊ. ಬಸವರಾಜ್ ಪಿ. ಡೋಣೂರ್ ಅವರು ಮಾತನಾಡಿ, ದೇಶದ ಅಭಿವೃದ್ಧಿ ಕಾಣಬೇಕಾದರೆ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಬಾರದು. ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ ಎಂಬ ವಿಷಯದ ಮೇಲೆ ಜಾಗೃತ ಜಾಗೃತಿ ಸಪ್ತಾಹವನ್ನು ಆಚರಿಸುವಾಗ ನಾವು ಇಂದು ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು ನಮ್ಮ ಕಾರ್ಯದಲ್ಲಿಯೂ ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಉಪ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತ ಏಕೀಕರಣಕ್ಕಾಗಿ ಶ್ರಮಿಸಿದ್ದರೂ ಈಗ ದೇಶವನ್ನು ವಿಭಜಿಸುವ ಶಕ್ತಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಆ ಕಾರ್ಯಗಳನ್ನು ಅರಿತು ಸಹೋದರತ್ವ, ದೇಶಭಕ್ತಿ ಮತ್ತು ದೇಶದ ಐಕ್ಯತೆಗಾಗಿ ಕೆಲಸ ಮಾಡಬೇಕು ಎಂದರು. ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಆವರಣದಲ್ಲಿ ಏಕತಾ ಓಟ ನಡೆಸಿತು.