ಭಾರತದ ಏಕತೆಗೆ ಅಂಬೇಡ್ಕರ್ ಕಾಣಿಕೆ ಅಪಾರ : ಯಾತನೂರ

ಕಲಬುರಗಿ,ಜು.26: ಭಾರತದ ಏಕತೆಯನ್ನು ಕಾಪಾಡಿರುವುದು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವಾಗಿದ್ದು ಜಾತಿ, ಸಮಾಜವೆಂಬ ವಿಭಜನೆಯನ್ನು ತಡೆಯಲು ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಚಂದ್ರಕಾಂತ ಯಾತನೂರ ಹೇಳಿದರು.
ಕಲಬುರಗಿ ಆಕಾಶವಾಣಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದ”ಅಮೃತ ಹೆಜ್ಜೆಗಳು” 17ನೇ ಸರಣಿಯಲ್ಲಿ ರಾಷ್ಟ್ರೀಯ ಏಕತೆಯ ಕಣ್ಮಣಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಾಗಿ ಉಪನ್ಯಾಸ ನೀಡುತ್ತಾ ಏಕಪೌರತ್ವ ಏಕನ್ಯಾಯಾಂಗ ವ್ಯವಸ್ಥೆ ಮತ್ತು ಮೂಲಭೂತ ಕಾನೂನುಗಳಲ್ಲಿ ಏಕ ರೂಪತೆ ಸೂಚಿಸಿ ಹಲವು ಧರ್ಮಗಳು, ಹಲವು ಪ್ರದೇಶಗಳು ಭಾಷೆಗಳು ಸಂಪ್ರದಾಯಗಳು ಮತ್ತು ಸಂಸ್ಕøತಿಗಳಲ್ಲಿ ಪ್ರಾದೇಶಿಕ ಸಮಗ್ರತೆ ಮತ್ತು ಆಡಳಿತಾತ್ಮಕ ಶಿಸ್ತನ್ನು ಕಾಪಾಡಿಕೊಳ್ಳಲು ಬಲಿಷ್ಠ ಕೇಂದ್ರ ಸರಕಾರದ ಅನಿವಾರ್ಯತೆ ಇದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದರು. ಸಮಗ್ರತೆ ಭಾವೈಕ್ಯತೆ ನಿರ್ಮಾಣಗೊಳ್ಳಲು ಸಂವಿಧಾನ ತಳಹದಿಯಲ್ಲಿ ಮಾತ್ರ ಸಾಧ್ಯವಾಯಿತೆಂದು ಯಾತನೂರ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ನ್ಯಾಯವಾದಿ ಬಸಣ್ಣ ಸಿಂಗೆ ಮಾತನಾಡಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರಿಗಾಗಿ ಬರೆದು ಏಕತೆ – ಸಮತೆ ಸಾಧಿಸಿದರು. ನಮ್ಮ ನೂತನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಅಧಿಕಾರ ಪಡೆದಿರುವುದು ಸಂವಿಧಾನದ ಕೊಡುಗೆಯಾಗಿದೆ. ಮಹಿಳೆಯರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಉನ್ನತ ಸ್ಥಾನ ಪಡೆಯಬಹುದು ಎಂಬುದಕ್ಕೆ ಸಾಕ್ಷಿ. ಮಹಿಳೆಯರಿಗೂ ಅಂಬೇಡ್ಕರ್ ಅವರು ಪ್ರಧಾನ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಭಾರತವನ್ನು ಭಾವೈಕ್ಯತಾ ರಾಷ್ಟ್ರವಾಗಿ ಕಟ್ಟಲು ಸಾಧ್ಯವಾಯಿತೆಂದು ಉಪನ್ಯಾಸಕರಾದ ಡಾ. ಸೂರ್ಯಕಾಂತ ಸುಜ್ಯಾತ ಹೇಳಿದರು. ಭಾರತೀಯರ ನೆರಳಾಗಿ ನಿಂತ ಅಂಬೇಡ್ಕರ್ ಸಮಸಮಾಜ ಸೃಷ್ಟಿ ಹಾಗೂ ಬಂಧುತ್ವ ಸಾಧಿಸಲು ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಿದರೆಂದು ಪರ್ತಕರ್ತರಾದ ಬಿ. ವಿ. ಚಕ್ರವರ್ತಿ ಹೇಳಿದರು.ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕೊಡುಗೆ ನೀಡಿ ಭಾರತೀಯರನ್ನು ಒಗ್ಗೂಡಿಸಿದ ಕೀರ್ತಿ ಅಂಬೇಡ್ಕರರಿಗೆ ಸಲ್ಲುತ್ತದೆ ಎಂದು ಲೇಖಕರಾದ ವಿಠಲ ವಗ್ಗನ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಮುಜುಂದಾರ್ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ನಂತರ ಸ್ವಾಗತ ಕೋರಿದರು. ಶಾರದಾ ಜಂಬಲದಿನ್ನಿ, ಸಂಗಮೇಶ್, ಲಕ್ಷ್ಮೀಕಾಂತ ಪಾಟೀಲ್, ಆರಾಧನಾ ನೆರವಾದರು. ಮಹ್ಮದ್ ಅಬ್ದುಲ್ ರವೂಫ್ ಮತ್ತು ಟಿ.ಡಿ.ಕುಲಕರ್ಣಿ ತಾಂತ್ರಿಕ ನೆರವು ನೀಡಿದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.