ನವದೆಹಲಿ,ಜೂ.೧೪- ಪ್ರಸಿದ್ಧ ಯೂ ಟ್ಯೂಬರ್ ಗಳು ಭಾರತದಿಂದ ಪಾಕಿಸ್ತಾನದಕ್ಕೆ ಭೇಟಿ ನೀಡಿದ ಪ್ರಸಂಗಗಳು ಇವೆ. ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಿಷಯ ತಿಳಿದೇ ಇದೆ. ಹಾಗೆಯೇ ಇತ್ತೀಚೆಗೆ ಕನ್ನಡದ ಮಹಿಳೆಯೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈಗ ಪಾಕಿಸ್ತಾನದ ಖ್ಯಾತ ವ್ಲಾಗರ್ ಅಬ್ರಾರ್ ಹಸನ್ ಭಾರತದಲ್ಲಿ ಬೈಕ್ ಟೂರ್ ಮಾಡಿ ತಮ್ಮ ಪ್ರಯಾಣದ ಉದ್ದಕ್ಕೂ ಭಾರತೀಯರ ಮನ ಗೆದ್ದಿದ್ದಾರೆ. ಜೊತೆಗೆ, ಅವರು ಭಾರತೀಯ ಆತಿಥ್ಯಕ್ಕೆ ಮಾರು ಹೋಗಿದ್ದಾರೆ.
ಅಬ್ರಾರ್ ಹಸನ್ ೩೦ ದಿನಗಳ ಕಾಲ ೭ ಸಾವಿರ ಕಿ. ಮೀ. ಗೆಳೆತನದ ಪ್ರವಾಸ ಮಾಡಿದ್ದಾರೆ. ಈ ಪ್ರವಾಸದ ಸಮಯದಲ್ಲಿ, ಹಸನ್ ಎರಡು ದೇಶಗಳ ನಡುವೆ ಹಳಸಿದ ಸಂಬಂಧದ ಹೊರತಾಗಿಯೂ, ಭಾರತೀಯರು ತಮ್ಮನ್ನು ಅಪಾರವಾಗಿ ಪ್ರೀತಿಸಿ,ಆತ್ಮೀಯವಾಗಿ ಸ್ವಾಗತಿಸಿ , ಗೌರವಿಸಿದನ್ನು ಅರಿತುಕೊಂಡಿದ್ದಾರೆ.
ದೆಹಲಿ, ಹರಿಯಾಣ, ರಾಜಸ್ಥಾನ, ಮುಂಬೈ, ಕೇರಳ ಸೇರಿದಂತೆ ಭಾರತದ ಹಲವು ನಗರಗಳಿಗೆ ಬೈಕ್ ಸವಾರ ಹಸನ್ ಪ್ರಯಾಣಿಸಿದ್ದು, ಅದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ವ್ಲಾಗರ್ ತನ್ನ ಯೂ ಟ್ಯೂಬ್ ಚಾನೆಲ್, ವೈಲ್ಡ್ ಲೆನ್ಸ್ ಬೈ ಅಬ್ರಾರ್‌ನಲ್ಲಿ ಪ್ರಯಾಣದ ವೀಡಿಯೊಗಳನ್ನು ಹಂಚಿಕೊಳ್ಳುತ್ತಾನೆ. ಹಸನ್ ಅವರು ಬಿಎಂಡಬ್ಲ್ಯು ಟ್ರಯಲ್ ಬೈಕ್ನಲ್ಲಿ ಸವಾರಿ ಮಾಡಿದ್ದಾರೆ. ಹೆಲ್ಮೆಟ್ ನಲ್ಲಿ ಅಳವಡಿಸಲಾದ ಮತ್ತು ಕೈಯಲ್ಲಿ ಹಿಡಿದುಕೊಳ್ಳುವ ವೃತ್ತಿಪರ ಕ್ಯಾಮೆರಾಗಳೊಂದಿಗೆ ತಮ್ಮ ಅದ್ಭುತ ಪ್ರಯಾಣವನ್ನು ಹಸನ್ ಚಿತ್ರೀಕರಿಸಿದ್ದಾರೆ. ಹಸನ್, ಭಾರತದ ಅತಿಥಿ ಎಂದು ಭಾವಿಸಿ ಅನೇಕರು ಅವರ ಊಟದ ಆತಿಥ್ಯ ವಹಿಸಿ ಗೌರವಿಸಿದ್ದಾರೆ.
ಅಲ್ಲದೆ, ಹಸನ್ ಜೊತೆ ಸ್ವಲ್ಪ ದೂರ ತಮ್ಮದೇ ಬೈಕ್ ನಲ್ಲಿ ಸುತ್ತಾಡಿ ಪ್ರೀತಿ ತೋರಿಸಿದ್ದಾರೆ.
ಏಪ್ರಿಲ್ ೩ರಂದು ಹಸನ್ ಪ್ರಯಾಣ ಆರಂಭಿಸಿದ್ದರು. ಅದಕ್ಕೂ ಮುನ್ನ ವೀಸಾ ಪಡೆಯಲು ವರ್ಷಗಟ್ಟಲೆ ಪರದಾಡಿದರು. ಕೊನೆಗೂ ಭಾರತದಲ್ಲಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. ಕೇರಳದ ಪ್ರವಾಸದಲ್ಲಿ ಹಾಸನ ಅವರು ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಯವ ಕಾರಣದ ಬಗ್ಗೆ ಮಾತನಾಡಿದ್ದಾರೆ. ಕೇರಳವನ್ನು ದೇವರ ಸ್ವಂತ ದೇಶ ಎಂದು ಕರೆಯಲು ಒಂದು ಕಾರಣವಿದೆ ಮತ್ತು ಕೇರಳದ ಹಿನ್ನೀರು ಬಹುಶಃ ಕೇರಳದ ಅನೇಕ ಅದ್ಭುತ ಸ್ಥಳಗಳಲ್ಲಿ ಒಂದಾಗಿದೆ, ಅದು ನೋಡಲೇಬೇಕಾದ ಸ್ಥಳವಾಗಿದೆ ಎಂದು ಹಸನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.
ರಾಜಸ್ಥಾನದ ಬಗ್ಗೆಯೂ ಹಸನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾಜರ ನಾಡು ಎಂದು ಕರೆಯಲ್ಪಡುವ ರಾಜಸ್ಥಾನವನ್ನು ಭಾರತದ ಅತಿದೊಡ್ಡ ರಾಜ್ಯ ಮತ್ತು ಅತ್ಯಂತ ಆಕರ್ಷಕ ಸಾಂಸ್ಕೃತಿಕ ಕೇಂದ್ರ ಎಂದು ಪ್ರಶಂಸಿಸಲಾಗುತ್ತದೆ ಎಂದಿದ್ದಾರೆ.