ಭಾರತದ ಅಕ್ಕಿಗೆ ಹೆಚ್ಚಿದ ಬೇಡಿಕೆ

ದೆಹಲಿ, ಜು.೧- ಇತ್ತೀಚಿಗಿನ ದಿನಗಳಲ್ಲಿ ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಭಾರತದ ಅಕ್ಕಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಕ್ಕಿ ಬೆಲೆ ೩೦ ಪ್ರತಿಶತ ಹೆಚ್ಚಳ ದಾಖಲಾಗಿದೆ. ಇದು ಮುಂದಿನ ದಿನಗಳಲ್ಲಿ ರೈತರಿಗೆ ಲಾಭ ತಂದುಕೊಡಲಿದೆಯಾದರೂ ಗ್ರಾಹಕರ ಜೀಬಿಗೆ ಕತ್ತರಿ ಬೀಳಲಿದೆ ಎಂಬ ಮಾತುಕತೆ ಮಾರುಕಟ್ಟೆ ಪಂಡಿತರಿಂದ ವ್ಯಕ್ತವಾಗಿದೆ.
ವಿಶ್ವದಲ್ಲೇ ಭಾರತ ಭತ್ತ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿದ್ದು, ಹಲವು ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ ಪ್ರಸಕ್ತ ವರ್ಷದಲ್ಲಿ ಭಾರತದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಅತಿವೃಷ್ಟಿಯಿಂದಾಗಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇರಾನ್, ಇರಾಕ್ ಸೌದಿ ಅರೇಬಿಯಾ ಅಲ್ಲದೆ ಭತ್ತ ಬೆಲೆಯುವ ಪ್ರಧಾನ ರಾಷ್ಟ್ರವಾಗಿರುವ ಬಾಂಗ್ಲಾದೇಶದಿಂದಲೂ ಭಾರತದ ಅಕ್ಕಿಗೆ ಬೇಡಿಕೆ ಬಹುಪಟ್ಟು ಏರಿಕೆಯಾಗಿದೆ. ಬಾಂಗ್ಲಾದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬೆಲೆಗೆ ತೀವ್ರ ಹಾನಿಯಾಗಿದೆ. ಇದು ಸಹಜವಾಗಿಯೇ ಅಲ್ಲಿನ ಭತ್ತದ ಬೇಡಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದರಿಂದ ಜೂನ್ ಆರಂಭದಿಂದಲೇ ಭಾರತದ ಹಲವು ರಾಜ್ಯಗಳಲ್ಲಿ ಅಕ್ಕಿಯ ಬೆಲೆಯಲ್ಲಿ ೩೦ ಪ್ರತಿಶತ ಹೆಚ್ಚಳವಾಗಿದೆ. ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಧಾನ್ಯದ ಕಡಿಮೆ ಬಿತ್ತನೆ ಕಂಡುಬಂದಿದ್ದರೆ ಖಾರಿಫ್ ಋತುವಿನಲ್ಲಿ ಪ್ರಾಥಮಿಕ ಬೆಳೆಯಾದ ಭತ್ತದ ಪ್ರದೇಶವು ಕಳೆದ ವರ್ಷ ಇದೇ ಅವಧಿಯಿಂದ ಜುಲೈ ೨೯ರ ಶನಿವಾರದವರೆಗೆ ದೇಶಾದ್ಯಂತ ೧೩.೩ ಶೇಕಡಾ ಕಡಿಮೆಯಾಗಿದೆ. ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಅಲ್ಪ ಮಳೆಯಿಂದಾಗಿ ರೈತರು ನಿಧಾನವಾಗಿ ಬಿತ್ತನೆ ಮಾಡಿರುವುದು ಇದಕ್ಕೆ ಕಾರಣವಾಗಿದೆ. ಭಾರತದ ಸೋನಾ ಮಸೂರಿಗೆ ಅಕ್ಕಿಗೆ ಬಾಂಗ್ಲಾದೇಶದಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಇತ್ತೀಚಿಗಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ಕರ್ನಾಟಕದಿಂದಲೂ ಸೋನಾ ಮಸೂರಿ ಅಕ್ಕಿಯನ್ನು ಬಾಂಗ್ಲಾದೇಶಕ್ಕೆ ರವಾನಿಸಲಾಗಿದೆ. ಇದು ಕೂಡ ದೇಶದಲ್ಲಿ ಅಕ್ಕಿ ಬೆಲೆ ಹೆಚ್ಚಾಗಲು ಕಾರಣವಾಗಿದೆ.