
ದೆಹಲಿ, ಮಾ.೮- ಆಹಾರದ ಭದ್ರತೆ ಎದುರಿಸುತ್ತಿರುವ ಹಲವು ದೇಶಗಳಿಗೆ ಭಾರತದ ನೆರವು ಮತ್ತೆ ಮುಂದುವರೆದಿದೆ. ಈಗಾಗಲೇ ಅಫ್ಗಾನಿಸ್ತಾನಕ್ಕೆ ಮೊದಲ ಹಂತದ ಗೋಧಿ ಸರಬರಾಜಾಗಿದ್ದು, ಇದೀಗ ಎರಡನೇ ಅವಧಿಯ ೨೦ ಸಾವಿರ ಮೆಟ್ರಿಕ್ ಟನ್ ರವಾನೆ ಪ್ರಕ್ರಿಯೆಯು ಇರಾನ್‌ನ ಚಬಹಾರ್ ಬಂದರ್‌ನ ಮೂಲಕ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಮ್‌ಇಎ) ಮಂಗಳವಾರ ತಿಳಿಸಿದೆ.
ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನದ ಭಾರತ-ಮಧ್ಯ ಏಷ್ಯಾ ಜಂಟಿ ವರ್ಕಿಂಗ್ ಗ್ರೂಪ್ (ಜೆಡಬ್ಲ್ಯೂಜಿ) ನ ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ಘೋಷಿಸಲಾಯಿತು. ಪ್ರಸ್ತುತ ಮಾನವೀಯ ಪರಿಸ್ಥಿತಿಯನ್ನು ಪರಿಹರಿಸಲು ಚಬಹಾರ್ ಬಂದರಿನ ಮೂಲಕ ಆಫ್ಘನ್ ಜನರಿಗೆ ೨೦,೦೦೦ ಮೆಟ್ರಿಕ್ ಟನ್ ಗೋಧಿಯನ್ನು ತಲುಪಿಸಲು ವಿಶ್ವಸಂಸ್ಥೆಯ ಆಹಾರ ಯೋಜನೆಯ ಜೊತೆ ಭಾರತವು ತನ್ನ ಪಾಲುದಾರಿಕೆಯನ್ನು ಘೋಷಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಭಾರತ, ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಹಿರಿಯ ಅಧಿಕಾರಿಗಳು ಮತ್ತು ರಾಯಭಾರಿಗಳ ಸಭೆಯಲ್ಲಿ ಹಾಜರಿದ್ದರು. ಭೂ ಮಾರ್ಗದ ಮೂಲಕ ಗೋಧಿಯನ್ನು ಕಳುಹಿಸುವ ಯೋಜನೆ ವಿಸ್ತರಿಸಲು ಪಾಕಿಸ್ತಾನದೊಂದಿಗಿನ ಒಪ್ಪಂದದ ಅವಧಿ ಮುಕ್ತಾಯಗೊಂಡಿತ್ತು. ಆದರೆ ರವಾನೆ ಪ್ರಕ್ರಿಯೆಯ ವಿಸ್ತರಣೆಯ ಕುರಿತು ಮಾತುಕತೆಗಳು ನಡೆದಿದ್ದರೂ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನ ಚಬಹಾರ್ ಬಂದರ್‌ನ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ರವಾನಿಸಲು ಭಾರತ ನಿರ್ಧರಿಸಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದೊಂದಿಗಿನ ಒಪ್ಪಂದದ ನಂತರ ಭಾರತವು ಕಳೆದ ವರ್ಷ ಭರವಸೆ ನೀಡಿದ್ದ ೫೦,೦೦೦ ಮೆಟ್ರಿಕ್ ಟನ್‌ನ ಸುಮಾರು ೪೦,೦೦೦ ಮೆಟ್ರಿಕ್ ಟನ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಪಾಕಿಸ್ತಾನದಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಸಾಗಾಟವನ್ನು ನಿಲ್ಲಿಸಲಾಗಿತ್ತು. ಅಲ್ಲದೆ ಪಾಕಿಸ್ತಾನ ಅನುಮತಿ ನೀಡಿದ್ದ ಅವಧಿ ಕೂಡ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಚಬಹಾರ್ ಬಂದರನ್ನು ಭಾರತ ಆಯ್ಕೆ ಮಾಡಿದೆ.